ಡೈಲಿ ವಾರ್ತೆ : 31 ಮೇ 2022

ಬೆಂಗಳೂರು: ನಾಡಗೀತೆ, ಕನ್ನಡ ಧ್ವಜವನ್ನು ಅವಮಾನಿಸಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಆಗ್ರಹಿಸಿದರು.

ಮಂಗಳವಾರ ಇಲ್ಲಿನ ಫ್ರೀಡಂ ಪಾರ್ಕಿನಲ್ಲಿ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರುಪರಿಷ್ಕರಣಾ ಸಮಿತಿಯನ್ನು ಸರಕಾರ ಕೂಡಲೇ ರದ್ದುಪಡಿಸಿ ಹಿಂದಿನ ವರ್ಷದ ಪಠ್ಯವನ್ನೆ ಮಕ್ಕಳಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಸಿದ್ಧಪಡಿಸಿದ್ದ ಶಾಲಾ ಪಠ್ಯ ಪುಸ್ತಕಗಳನ್ನು ಸರಕಾರ ತರಾತುರಿಯಲ್ಲಿ ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ನೇಮಿಸಿ ಅದರ ಶಿಫಾರಸಿನನ್ವಯ ಭಾಷೆ ಪಠ್ಯ ಹಾಗೂ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಖಂಡನಾರ್ಹ ಬದಲಾವಣೆಗಳನ್ನು ತಂದಿದೆ.

ಈಗ ಮರುಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ಹಂಚಲು ಹೊರಟಿರುವ ಕ್ರಮ ಲಕ್ಷಾಂತರ ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮಗಳಾಗಲಿವೆ ಎಂದು ಟಿ.ಎ.ನಾರಾಯಣಗೌಡ ಆತಂಕ ವ್ಯಕ್ತಪಡಿಸಿದರು.

ಕನ್ನಡದ ಹೆಮ್ಮೆಯ ಸಾಹಿತಿ, ಲೇಖಕರಾದ ಪಿ.ಲಂಕೇಶ್, ಸಾ.ರಾ.ಅಬೂಬಕರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅರವಿಂದ ಮಾಲಗತ್ತಿ, ಬಿ.ಟಿ.ಲಲಿತಾನಾಯಕ್ ಮೊದಲಾದವರ ಮೌಲ್ವಿಕ ಪಠ್ಯಗಳನ್ನು ಕಿತ್ತುಹಾಕಿ ಕನ್ನಡದ ಚಿಂತನೆಗಳನ್ನು ಅವಮಾನಿಸಲಾಗಿದೆ. 10ನೆ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ನಾರಾಯಣ ಗುರುಗಳ ಪಾಠವನ್ನು ತೆಗೆದುಹಾಕಲಾಗಿದೆ. ಇದರ ಬದಲಿಗೆ ಸಂಘ ಪರಿವಾರದ ಸಿದ್ಧಾಂತ ಸಂಘಟನೆಯ ಪರವಾದ ಪಠ್ಯಗಳನ್ನು ಹಾಕಲಾಗಿದೆ ಎಂದು ಅವರು ಟೀಕಿಸಿದರು.