ಡೈಲಿ ವಾರ್ತೆ : 30 ಜೂನ್ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ತಾಳಗುಪ್ಪ: ಸರ್ಕಾರದ ಸವಲತ್ತುಗಳನ್ನು ನ್ಯಾಯಬದ್ಧವಾಗಿ ಪಡಯುವ ಮಾರ್ಗವನ್ನು ಸಾರ್ವಜನಿಕರು ಆಯ್ಕೆಮಾಡಿಕೊಳ್ಳಬೇಕೆಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಅವರು ತಾಳಗುಪ್ಪ ಹೋಬಳಿಯ ಕಂದಾಯ ಇಲಾಖೆಯ ನೂತನವಾಗಿ ನಿರ್ಮಿಸಲ್ಪಟ್ಟ ನಾಡಕಛೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಾರ್ವಜನಿಕರ ಬಹಳ ವರ್ಷಗಳ ಹೋರಾಟದ ಫಲವಾಗಿ ಇಂದು ಸುವ್ಯವಸ್ಥಿತ ನಾಡ ಕಛೇರಿ ಜನರ ಸೇವೆಗೆ ಸಿದ್ಧವಾಗಿದೆ. ಇದರ ಸದುಪಯೋಗ ಜನರಿಗೆ ಸಿಗುವಂತಾಗಬೇಕು, ಕಂದಾಯ ಇಲಾಖೆ ಹೆಸರಿಗಷ್ಟೆ ದೊಡ್ಡದು ಆದರೆ ಅದರ ಅಭಿವೃದ್ಧಿಗೆ ಹಣಕಾಸು ಬಿಡುಗಡೆ ನಿಧಾನವಾಗುತ್ತದೆ. ಆ ಕಾರಣದಿಂದ ನಾಡಕಛೇರಿ ಇನ್ನಷ್ಟು ಅಭಿವೃದ್ಧಿ ಹೊಂದಲು ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.

ತಾಳಗುಪ್ಪ ರಾಜಕೀಯವಾಗಿ ಸೊರಬಾಕ್ಕೂ ತಾಲ್ಲೂಕಿನ ವಿಷಯದಲ್ಲಿ ಸಾಗರಕ್ಕೂ ಸೇರ್ಪಡೆಯಾಗಿ ಹಿಂದುಳಿಯುವಂತಾಗಿತ್ತು. ಈ ವಿಷಯ ಪರುಗಸಣಿಸಿ ಕಳೆದ ಒಂದೂವರೆ ವರ್ಷದಿಂದ ಸೇತುವೆ ,ರಸ್ತೆ ,ಸಭಾಭವನ, ಆಸ್ಪತ್ರೆ ಮುಂತಾದ ವಿಷಯದಲ್ಲಿ ಹೆಚ್ಚಿನ ಅನುದಾನ ಸಿಗುವಂತೆ ಮಾಡಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಸಣ್ಣ ರಸ್ತೆಗಳನ್ನೂ ಗುರುತಿಸಿ ಹತ್ತು ಕೋಟಿ ರೂಪಾಯಿಗೂ ಹೆಚ್ಚಿನ ರಸ್ತೆ ಕಾಮಗಾರಿ ಮಾಡಲಾಗಿದೆ. ಕಾಗೋಡು ಗ್ರಾಮದಲ್ಲಿ ಪವರ್ ಗ್ರಿಡ್ ಮಂಜೂರಾಗಿದ್ದು ಟೆಂಡರ್ ಕರೆಯಲಾಗಿದೆ. ಇದರಿಂದಾಗಿ ಈ ಭಾಗದ ರೈತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ಸಾಗರದಿಂದ ಜೋಗದವರೆಗೆ ರೈಲ್ವೆ ಲೆವಲ್ ಕ್ರಾಸಿಂಗ್ ಮೇಲ್ಸೇತುವೆ, ಕಾನ್ಲೆ ಕುಗ್ವೆಗಳಲ್ಲಿ ಅಂಡರ್ ಪಾಸ್ ಸೇರಿದಂತೆ ಹಲವಾರು ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಳಗುಪ್ಪ ಕೇಂದ್ರ ಪ್ರದೇಶವಾಗಿದ್ದು ಇಲ್ಲಿಗೆ ಜೋಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಪಟ್ಟಣದ ಮೇಲೆ ಒತ್ತಡ ಇದೆ. ಇದನ್ನು ಪರಿಗಣಿಸಿ ಗ್ರಾಪಂ ನಿಂತ ಪಟ್ಟಣ ಪಂಚಾಯಿತಿಗೆ ಏರಿಸುವ ಪ್ರಸ್ತಾವನೆ ಇದೆ. ಅದೇ ರೀತಿ ಸುವ್ಯವಸ್ಥಿತ ಆಸ್ಪತ್ರೆ ನಿರ್ಮಿಸಲು ಹತ್ತು ಎಕರೆ ಜಾಗದ ಮಂಜೂರಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಾನ್ಲೆ ರೈಲ್ಬೆ ಗೂಡ್ಸ್ ವೇರ್ ಹೌಸ್ ಸ್ಥಾಪನೆ‌ ನಡೆಯುತ್ತದೆ. ಸಂತೆ ಮೈದಾನಕ್ಕೆ ಒಂದು ಕೋಟಿ ರೂಪಾಯಿ ಮಂಜೂರಾಗಿದ್ದು ಜಾಗದ ಕೊರತೆಯಿಂದ ಹಿನ್ನಡೆಯುಂಟಾಗಿದೆ. ಇವನ್ನೆಲ್ಲ ಪರಿಗಣಿಸಿ ಹಂತಹಂತವಾಗಿ ಕೆಲಸ‌ಮಾಡಲಾಗುವುದು ಎಂದರು.

ವೇದಿಕೆಯಲ್ಲಿ ಸಾಗರ ತಾಲ್ಲೂಕು ವಿಭಾಗಾಧಿಕಾರಿ ನಾಗರಾಜ್, ಸಾಗರ ತಹಸಿಲ್ದಾರ್ ಮಲ್ಲೇಶ್ ಪೂಜಾರ್, ತಾಪಂ ಇ ಒ ಪುಷ್ಪಾ, ಮರತ್ತೂರು ಗ್ರಾಪಂ ಅಧ್ಯಕ್ಷೆ ನೇತ್ರಾವತಿ ರಾಮಪ್ಪ, ಸುರೇಂದ್ರ, ಶಾಂತಕುಮಾರ್, ಲಕ್ಷ್ಮೀನಾರಾಯಣ, ಲಕ್ಷ್ಮೀ‌ ಮಂಜುನಾಥ್, ಉಪ ತಹಸಿಲ್ದಾರ್ ಕಲ್ಲಪ್ಪ, ಶಿಲ್ಪಾ, ಬಗರ್ ಹುಕುಂ ಸಮಿತಿ ಸದಸ್ಯೆ ಲಲಿತಾ ನಾರಾಯಣ್, ಮತ್ತಿತರರು ಉಪಸ್ಥಿತರಿದ್ದರು.