ಡೈಲಿ ವಾರ್ತೆ : 30 ಜೂನ್ 2022

ವರದಿ: ಶಿವಾನಂದ ಆರ್.ಬಿದರಕುಂದಿ.


ವಿಜಯಪುರ.(ಜೂ.30) ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ನರಭಕ್ಷಕ ಮೊಸಳೆ ಹಾವಳಿ ಹೆಚ್ಚಾಗಿದ್ದು ಇಂದು ಮತ್ತೊಬ್ಬ ವ್ಯಕ್ತಿ ಮೊಸಳೆಗೆ ಆಹಾರವಾಗಿದ್ದಾನೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಂಡರಗಲ್ಲ ಗ್ರಾಮದ ಮೃತನನ್ನು ಹಂಡರಗಲ್ಲ ಗ್ರಾಮದ ನಾಗಪ್ಪ ಸಂಜಿವಪ್ಪ ಉಂಡಿ (55) ಎಂದು ಗುರ್ತಿಸಲಾಗಿದೆ. ಕಳೆದ ವಾರ ಇದೇ ಭಾಗದಲ್ಲಿ ಹಂಡರಗಲ್ಲ ಪಕ್ಕದ ನಾಗರಾಳ ಗ್ರಾಮದ ವ್ಯಕ್ತಿಯನ್ನು ಮೊಸಳೆ ಬಲಿ ಪಡೆದಿತ್ತು. ಮೃತನಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಪಿಎಸ್ ಐ ರೇಣುಕಾ ಜಕನೂರ ಹಾಗೂ ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವವನ್ನು ನದಿಯಿಂದ ಹೊರಗೆ ತರಲು ಕ್ರಮ ಕೈ ಗೊಂಡರು.


ನರಭಕ್ಷಕ ಮೊಸಳೆ ಹಾವಳಿ ನಿಯಂತ್ರಿಸುವಲ್ಲಿ ವಿಫಲರಾಗಿರುವ ಅರಣ್ಯ ಅಧಿಕಾರಿಗಳ ವಿರುದ್ದ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮೊದಲ ಬಲಿ ಘಟನೆ ನಡೆದಾಗಲೇ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ವ್ಯಾಪಕ ಪ್ರಚಾರ, ಜಾಗೃತಿ ನಡೆಸಿದ್ದರೆ ಇಂದಿನ ಘಟನೆ ತಪ್ಪಿಸಬಹುದಿತ್ತು. ಆದರೆ ಅವರು ಡಂಗೂರ ಸಾರುವಂತೆ ಗ್ರಾಮ ಪಂಚಾಯತ್ ನವರಿಗೆ ಬೆಜವ್ದಾರಿ ಹೇಳಿಕೆ ಹೇಳಿ ಕೈ ತೊಳೆದುಕೊಂಡಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಮುಂದೆ ಆಗಬಹುದಾದ ಅನಾಹುತ ತಡೆಗಟ್ಟಲು ಮುಂದಾಗಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಮಹಾಂತೇಶ ಪಟ್ಟಣದ ಮತ್ತಿತರರು ಒತ್ತಾಯಿಸಿದ್ದಾರೆ. ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಶಾಸಕರ ಬೇಟಿ:
ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿಯವರು ಮುದ್ದೇಬಿಹಾಳ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ನಿನ್ನೇ ದಿನ ಮೊಸಳೆ ದಾಳಿಗೆ ತುತ್ತಾಗಿ ಸಾವನಪ್ಪಿದ ಹಂಡರಗಲ್ಲ ಗ್ರಾಮದ ನಾಗಪ್ಪ ಸಂಜೀವಪ್ಪ ಉಂಡಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.