ಡೈಲಿ ವಾರ್ತೆ : 31 ಆಗಸ್ಟ್ 2022

ಸಂಪಾದಕರು : ಇಬ್ರಾಹಿಂ ಕೋಟ

ವ್ಯಕ್ತಿಯೊರ್ವ ಆತ್ಮಹತ್ಯೆಗೆಂದು ಉಪ್ಪೂರು ನದಿಗೆ ಹಾರಲು ಯತ್ನ: ಆತನ ಜೀವ ಉಳಿಸಿದ ಜೀವರಕ್ಷಕ ಕೋಟತಟ್ಟು ಯೋಗೇಂದ್ರ ಪುತ್ರನ್..!

ಕೋಟ : ರೋಗಿಗಳು ಮತ್ತು ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗಳಿಗೆ ಸಾಗಿಸಿ, ನೂರಾರು ಅಮೂಲ್ಯ ಪ್ರಾಣಗಳನ್ನುಳಿಸುವ ಆಂಬ್ಯುಲೆನ್ಸ್ ಚಾಲಕರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೌರವ ಭಾವನೆ ಇರುತ್ತದೆ. ಪಾರ್ಥಿವ ಶರೀರದ ಸಾಗಾಟದಲ್ಲಿಯೂ ಇವರ ಸೇವೆ ಬಹಳಷ್ಟಿರುತ್ತದೆ. ಇಂತಹ ಕಾರ್ಯಾಚರಣೆಗಳಲ್ಲಿ ಅವರು ತಮ್ಮ ಜೀವದ ಹಂಗು ತೊರೆದು ಇತರರ ಜೀವ ಕಾಪಾಡುವಲ್ಲಿ ಶ್ರಮಿಸುತ್ತಾರೆ. ಆದ್ದರಿಂದಲೇ ಅಂಬುಲೆನ್ಸ್ ಚಾಲಕರನ್ನು ಆಪತ್ಬಾಂಧವರೆಂದೇ ಗುರುತಿಸುತ್ತಾರೆ. ಇವೆಲ್ಲಾ ಕಾರ್ಯಗಳ ಹೊರತಾಗಿ, ಇಲ್ಲೊಬ್ಬ ಆಂಬ್ಯುಲೆನ್ಸ್ ಚಾಲಕರು, ಅಪವೇಳೆಯಲ್ಲಿ ಕ್ಷಣಮಾತ್ರದಲ್ಲಿ ಹಾರಿಹೋಗಬಹುದಾಗಿದ್ದ ಜೀವವೊಂದನ್ನು ಉಳಿಸಿ, ಆ ಕುಟುಂಬದ ನೈಜ ಆಪತ್ಬಾಂಧವರಾಗಿದ್ದಾರೆ.
ಅವರೇ, ಈ ಘಟನೆಯ ಹೀರೋ ಕೋಟತಟ್ಟು ಗ್ರಾಮದ ಯೋಗೇಂದ್ರ ಪುತ್ರನ್.

ಈ ಯೋಗೇಂದ್ರ ಪುತ್ರನ್ ಓರ್ವ ಸಮಾಜ ಸೇವಕ. ಬಿಡುವಿನ ವೇಳೆಯಲ್ಲಿ ಕೋಟ ಜೀವನ್ ಮಿತ್ರನ ಆಂಬ್ಯುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಾರೆ.
ಇವರು ಸಾಹಸ ಪ್ರವೃತ್ತಿಯ, ಜನಾನುರಾಗಿ ಸಮಾಜ ಸೇವಕನಾಗಿ ಗುರುತಿಸಲ್ಪಟ್ಟವರು. ದಿನದ ಯಾವುದೇ ವೇಳೆಯಲ್ಲೂ ಆಂಬ್ಯುಲೆನ್ಸ್ ಗೆ ಆರ್ತರಿಂದ ಕರೆಬಂದಾಕ್ಷಣ ನೆರವಿಗೆ ಧಾವಿಸುವ ಆಪತ್ಬಾಂಧವ. ಆದರೆ, ಈಗ ಇಲ್ಲಿ ಹೇಳಹೊರಟಿರುವ ಘಟನೆಯಲ್ಲಿ ಇವರು ಕಾಪಾಡಿದ್ದು ಯಾವ ಅಪಘಾತದ ಗಾಯಾಳುವನ್ನೂ ಅಲ್ಲ, ರೋಗಿಯನ್ನೂ ಅಲ್ಲ! ಜೀವನದಲ್ಲಿ ಜಿಗುಪ್ಸೆ ಸೃಷ್ಟಿಸಿಕೊಂಡು, ಕೈ ಹಿಡಿದ ಮಡದಿಯನ್ನು ಮರೆತು, ಕ್ಷಣಿಕ ದುಡುಕಿನಿಂದ ಹೊಳೆಪಾಲಾಗುತ್ತಿದ್ದ ಓರ್ವ ವ್ಯಕ್ತಿಯನ್ನು. ಅದೂ ಮಧ್ಯರಾತ್ರಿ ಸುಮಾರು 1.40 ಗಂಟೆಗೆ.

ಈ ರೋಚಕ ಘಟನೆಯ ವಿವರ ಹೀಗಿದೆ :
ಆ.30ರ ಮಂಗಳವಾರ ಯೋಗೇಂದ್ರ ಪುತ್ರನ್ ರೋಗಿ ಮತ್ತವರ ಕಡೆಯವರನ್ನು ಉಡುಪಿಯ ಆಸ್ಪತ್ರೆಯಿಂದ ರಾತ್ರಿ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿದ್ದರು. ಮಧ್ಯರಾತ್ರಿ ಸುಮಾರು 1.40ರ ವೇಳೆ. ನಿರ್ಜನವಾದ ಹೈವೇ. ಎದುರಿನಿಂದ ಕಣ್ಣು ಕುಕ್ಕುವ ಬೆಳಕಿನೊಂದಿಗೆ ಭರ್ರನೆ ಹಾದುಹೋಗುವ ವಾಹನಗಳು, ಜಿನುಗು ಮಳೆಯ ತಣ್ಣನೆಯ ರಾತ್ರಿ. ಆಂಬ್ಯುಲೆನ್ಸ್ ಆಗಿದ್ದರಿಂದ ವೇಗವಾಗಿಯೇ ಧಾವಿಸುತ್ತಿತ್ತು. ವಾಹನದಲ್ಲಿರುವ ರೋಗಿಗಳ ಯೋಗಕ್ಷೇಮದ ಜವಾಬ್ದಾರಿಯಿದ್ದ ಯೋಗೇಂದ್ರ ಮೈಯೆಲ್ಲಾ ಕಣ್ಣಾಗಿ ರಸ್ತೆ ಮೇಲೆ ಗಮನ ಕೇಂದ್ರೀಕರಿಸಿ ಆಂಬ್ಯುಲೆನ್ಸ್ ಓಡಿಸುತ್ತಿದ್ದರು. ಬ್ರಹ್ಮಾವರ ಸಮೀಪದ ಹೇರೂರು ಸೇತುವೆಯನ್ನು ಹಾದು ಹೋಗುವಾಗ ಸೇತುವೆಯ ಬಳಿ ನಿಂತಿದ್ದ ಓರ್ವ ವ್ಯಕ್ತಿ ಥಟ್ಟನೆ ಇವರ ಕಣ್ಣಿಗೆ ಬೀಳುತ್ತಾನೆ. ಆತ ಗಸ್ತು ನಿರತ ಪೊಲೀಸ್ ಅಲ್ಲ, ದಾರಿಹೋಕನೂ ಅಲ್ಲ. ನಡು ಸೇತುವೆಯಲ್ಲಿ ನಿಂತುಕೊಂಡು ತುಂಬಿ ಹರಿಯುತ್ತಿದ್ದ ಹೊಳೆಯನ್ನು ನೋಡುತ್ತಿದ್ದಾನೆ! ಶರವೇಗದಲ್ಲಿ ವಾಹನ ಚಲಾಯಿಸುತ್ತಿದ್ದರೂ ಪ್ರಖರ ಬೆಳಕಿನಲ್ಲಿ ಆ ವ್ಯಕ್ತಿಯನ್ನು ಕಂಡ ಯೋಗೇಂದ್ರರಿಗೆ ಆತ ಯಾಕೆ ಹೊಳೆ ಇಣುಕುತ್ತಿದ್ದ ಎಂಬುದು ಥಟ್ಟನೆ ಹೊಳೆಯಿತು. ತಡ ಮಾಡದೆ ಗಾಡಿ ನಿಲ್ಲಿಸಿ, ಓಡಿ ಹೋಗಿ ಆತನ ರಟ್ಟೆಗೆ ಕೈ ಹಾಕಿ ಎಳೆ ತಂದು ವಿಚಾರಿಸಿದರು. ನಿರ್ಜನ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಗೆ ಭಂಗ ಉಂಟಾಗಿ ಆ ವ್ಯಕ್ತಿ ಗಲಿಬಿಲಿಗೊಂಡರೂ, ತನ್ನ ಕರುಣಾಜನಕ ಕತೆಯನ್ನು ವಿವರಿಸಿದ. ತಕ್ಷಣ ಚಾಲಕ ಯೋಗೇಂದ್ರ ಆತನನ್ನು ಕೋಟ ಪೊಲೀಸ್ ಠಾಣೆಗೆ ಕರೆತಂದರು.

ಪೊಲೀಸರು ಇವನನ್ನು ‘ಉಪಚರಿಸಿ’ ಕೇಳಿದಾಗ ತನ್ನ ಕರುಣಾಜನಕ ಕತೆಯನ್ನು ಬಿಚ್ಚಿಟ್ಟ. ಪೊಲೀಸರು ಎಚ್ಚರಿಕೆ ನೀಡಿದಾಗ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬ ಮುಚ್ಚಳಿಕೆಯನ್ನೂ ಬರೆದುಕೊಟ್ಟ.

ಆತನ ಮುಚ್ಚಳಿಕೆಯಲ್ಲಿ ಬರೆದಂತೆ, ಆತನ ಆತ್ಮಹತ್ಯಾ ಯೋಜನೆ ರೂಪುತಳೆದದ್ದು ಹೀಗೆ : ಮೂಲತಃ ಸಾಯಿಬ್ರಕಟ್ಟೆ ಬಳಿಯ ಕಾಜ್ರಳ್ಳಿ ನಿವಾಸಿಯಾಗಿದ್ದ ಈ ವ್ಯಕ್ತಿ ಮಲ್ಪೆಯ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಂತೆಕಟ್ಟೆ ಸಮೀಪದ ಪಟ್ಟುಕೆರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸಿಸಿದ್ದ.

ಸೋಮವಾರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದ. ಯಾವುದೋ ಕಾರಣಕ್ಕೆ ಹೆಂಡತಿಯೊಂದಿಗೆ ಜಗಳವಾಯಿತಂತೆ. ಮನಸ್ಸಿಗೆ ಭಾರಿ ಬೇಜಾರಾಯಿತು. ಅಷ್ಟಕ್ಕೇ ಜೀವನವನ್ನೇ ಕೊನೆಗಾಣಿಸುವ ಘೋರ ನಿರ್ಧಾರ ತಳೆದ! ಮರುದಿನ ಆ 30 ರ ಬೆಳಿಗ್ಗೆ 10ಕ್ಕೆ ಮನೆ ಬಿಟ್ಟ. ಸೀದಾ ಉಡುಪಿಗೆ ಬಂದು ಒಂದು ಸಿನಿಮಾ ನೋಡಿದ. ಅಲ್ಲಿಂದ ಮಲ್ಪೆ ಬೀಚಿಗೆ ಬಂದು ಅಡ್ಡಾಡಿದ. ರಾತ್ರಿಯವರೆಗೂ ಕಾಲಕಳೆದ. ತಣ್ಣನೆಯ ಹವೆಯಲ್ಲೂ ಈತನ ಕಠಿಣ ನಿರ್ಧಾರ ಸಡಿಲಾಗಲೇ ಇಲ್ಲ. ರಾತ್ರಿ ಸುಮಾರು 1.40ರ ವೇಳೆಗೆ ಹೇರೂರು ಸೇತುವೆಗೆ ಬಂದು ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಅಣಿಯಾದ. ಅವನ ದುರಾದೃಷ್ಟವೋ ಅವನ ಹೆಂಡತಿಯ ಅದೃಷ್ಟವೋ ಏನೋ ನಮ್ಮ ಆಪತ್ಬಾಂಧವ ಯೋಗೇಂದ್ರರ ಕಣ್ಣಿಗೆ ಬಿದ್ದ. ಅಂತೂ ಹೊಳೆಪಾಲಾಗಬೇಕಿದ್ದ ಒಂದು ಅಮೂಲ್ಯ ಜೀವ ಉಳಿದುಕೊಂಡಿತು.

ಇಷ್ಟೆಲ್ಲಾ ಆದರೂ ಯೋಗೇಂದ್ರ ಆ ವ್ಯಕ್ತಿಯನ್ನು ಬಿಟ್ಟುಬಿಡಲಿಲ್ಲ. ಆ ವ್ಯಕ್ತಿ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು, ತಾನಿನ್ನು ಆತ್ಮಹತ್ಯೆ ಯೋಚನೆ ಬಿಟ್ಟು, ಹೆಂಡತಿಯೊಂದಿಗೆ ಸರಿಯಾಗಿ ಜೀವನ ಮಾಡುವೆ ಎಂದು ಮಾತುಕೊಟ್ಟ ನಂತರ, ಅದೇ ಆಂಬ್ಯುಲೆನ್ಸ್ ನಲ್ಲಿ ಅವನನ್ನು ಕರೆದುಕೊಂಡು ಬಂದರು. ಅದರಲ್ಲಿದ್ದ ರೋಗಿ ಮತ್ತವರ ಕಡೆಯವರನ್ನು ಗಮ್ಯ ತಲುಪಿಸಿದ ನಂತರ ಈ ‘ಮಧ್ಯರಾತ್ರಿಯ ಸಾಹಸಿ’ಯನ್ನು ಅದೇ ವಾಹನದಲ್ಲಿ ಕರೆದೊಯ್ದು ಬೆಳಗಿನ ಜಾವ ಸಂತೆಕಟ್ಟೆಯ ಅವನ ಮನೆಯಲ್ಲಿ, ಅವನ ಹೆಂಡತಿಯ ಸುಪರ್ದಿಗೊಪ್ಪಿಸಿ ನಿಟ್ಟುಸಿರು ಬಿಟ್ಟರು. ಆಪತ್ಬಾಂಧವ ಯೋಗೇಂದ್ರ ಪುತ್ರನ್ ರಿಂದಾಗಿ, ಕ್ಷಣಿಕವಾದ ದುಡುಕಿನ ನಿರ್ಧಾರದಿಂದ ಇಹಲೋಕವನ್ನೇ ತ್ಯಜಿಸುವ ಕಠೋರ ನಿರ್ಧಾರ ತಳೆದ ಒಂದು ಜೀವ, ತನ್ನ ಪ್ರಿಯ ಮಡದಿಯೊಂದಿಗೆ ಬುಧವಾರ ಸಂಭ್ರಮದಿಂದ ಗಣೇಶ ಚೌತಿಯನ್ನು ಆಚರಿಸುವಂತಾಯಿತು. ಗಂಡ – ಹೆಂಡತಿಯ ಜಗಳ ಗಣೇಶನ ಅನುಗ್ರಹದಿಂದ ಸುಖಾಂತ್ಯವಾಯಿತು.