ಡೈಲಿ ವಾರ್ತೆ: 30 ನವಂಬರ್ 2022

ಶಿಕ್ಷಕರಿಂದ ಶಾಲಾ ಮಕ್ಕಳ‌ ಬ್ಯಾಗ್ ಪರಿಶೀಲನೆ: ಕಾಂಡೋಮ್, ಗರ್ಭ‌ನಿರೋಧಕ‌ ಮಾತ್ರೆ ಸೇರಿ ಹಲವು ವಸ್ತುಗಳು ಪತ್ತೆ!

ಬೆಂಗಳೂರು: ನಗರದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ವೇಳೆ ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು, ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಸಿಕ್ಕಿದ್ದು ಶಿಕ್ಷಕರು ಶಾಕ್ ಆಗಿದ್ದಾರೆ.

ಶಾಲೆಗೆ ಮೊಬೈಲ್ ತರುತ್ತಾರೆಂದು ಆರೋಪದ ಹಿನ್ನೆಲೆ 8,9 ಮತ್ತು 10ನೇ ತರಗತಿಯ ಹೈಸ್ಕೂಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬ್ಯಾಗ್ ಗಳನ್ನು ಪರಿಶೀಲನೆ‌ ನಡೆಸಿದಾಗ ಕಾಂಡೋಮ್, ಗರ್ಭ ನಿರೋಧಕ‌ ಮಾತ್ರೆ ಪತ್ತೆಯಾಗಿದೆ.

ಈ ಬಗ್ಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೌನ್ಸಿಲಿಂಗ್ ನಡೆಸುವಂತೆ ಸೂಚಿಸಲಾಗಿದೆ. ಕೆಲವು ಶಾಲೆಗಳು ವಿಶೇಷವಾಗಿ ಪೋಷಕರ ಸಭೆಗಳನ್ನು ನಡೆಸಿ ಮಾಹಿತಿ ನೀಡಿದ್ದಾರೆ.

ಮಕ್ಕಳ ಅವಸ್ಥೆ ತಿಳಿದು ಪೋಷಕರು ಆಘಾತಕ್ಕೊಳಗಾದರು ಮತ್ತು ಮಕ್ಕಳಲ್ಲಿ ಹಠಾತ್ ವರ್ತನೆಯ ಬದಲಾವಣೆಗಳ ಬಗ್ಗೆ ಶಿಕ್ಷಕರಿಗೆ ಹೇಳಿದ್ದಾರೆ.

ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಬದಲು ಕೌನ್ಸೆಲಿಂಗ್ ಅನ್ನು ಶಿಫಾರಸು ಮಾಡಲಾಗಿದೆ. ಇದಕ್ಕೆ 10 ದಿನಗಳವರೆಗೆ ರಜೆ ನೀಡಿದ್ದೇವೆ ಎಂದು ಶಾಲೆಯೊಂದರ ಪ್ರಾಂಶುಪಾಲರು ಹೇಳಿದ್ದಾರೆ.

ಮಕ್ಕಳ ಬ್ಯಾಗ್ ನಲ್ಲಿ ಗರ್ಭ ನಿರೋಧಕ ಮಾತ್ರೆ ಪತ್ತೆ ವಿಚಾರವಾಗಿ ರುಪ್ಸಾ ಅಧ್ಯಕ್ಷ ಲೋಕೆಶ್ ತಾಳಿಕಟ್ಟೆ ಪ್ರತಿಕ್ರಿಯೆ ನೀಡಿ, ಮಕ್ಕಳು ದಿಕ್ಕು ತಪ್ಪಿ ಸಾಗುತ್ತಿದ್ದಾರೆ. ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಅನೈತಿಕ ವಿಚಾರಗಳ ಬಗ್ಗೆ ಒಲವು ಹೆಚ್ಚಾಗಿದೆ. ಮಕ್ಕಳಿಗೆ ಕೌನ್ಸಿಲಿಂಗ್ ಅಗತ್ಯವಿದೆ. ಈ ಬಗ್ಗೆ ಪೋಷಕರು ಗಮನಿಸಬೇಕು ಎಂದು ಹೇಳಿದ್ದಾರೆ.