ಡೈಲಿ ವಾರ್ತೆ: 30 ನವಂಬರ್ 2022

ಕುಂದಾಪುರ: ನಮ್ಮ ನಾಡ ಒಕ್ಕೂಟದ ಕೇಂದ್ರ ಕಚೇರಿ ಲೋಕಾರ್ಪಣೆ!

ಕುಂದಾಪುರ:ನಮ್ಮ ನಾಡ ಒಕ್ಕೂಟದ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭವು ನ. 29 ರಂದು ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಪ್ಲೇಸೆಂಟ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಇದರ ಉದ್ಘಾಟನೆಯನ್ನು ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಅವರು ಉದ್ಘಾಟಿಸಿದರು. ಅವರು ಮಾತನಾಡಿ ಸಮಾಜ ಕಟ್ಟುವ ಕಾರ್ಯಗಳನ್ನು ಮಾಡಿದವರನ್ನು ಸಮಾಜ ಖಂಡಿತ ಗುರುತಿಸುತ್ತದೆ.
ಇಂತಹ ಗುರುತಿಸುವಿಕೆಯಿಂದ ಸಮಾಜ ಸೇವಕರಿಗೆ ಸಂತೃಪ್ತಿ ಮತ್ತು ಯುವ ಪೀಳಿಗೆಗೆ ಮಾರ್ಗದರ್ಶನ ಸಿಗುತ್ತದೆ. ಯಾವುದೇ ಸಂಘ ಸಂಸ್ಥೆಗಳು ಶಿಕ್ಷಣದ ಮಹತ್ವವರಿತು, ಆ ದಿಸೆಯಲ್ಲಿ ಮುನ್ನಡೆದರೆ ಸುಶಿಕ್ಷಿತ ಸಮಾಜ ರೂಪುಗೊಳ್ಳುತ್ತದೆ. ನಮ್ಮ ನಾಡು ಒಕ್ಕೂಟ ಈ ದಿಸೆಯಲ್ಲಿ ಅಡಿ ಇರಿಸುತ್ತಿರುವುದು ಒಳಕೆಯ ಭವಿಷ್ಯದ ಮುನ್ಸೂಚನೆಯಾಗಿದೆ ಎಂದು ಗೋಪಾಲ ಪೂಜಾರಿ ಹೇಳಿದರು.

ಕುಂದಾಪುರ ವಕೀಲರಾದ ಶಿರಿಯಾರ ಗೋಪಾಲ ಕೃಷ್ಣ ಶೆಟ್ಟಿ ಮಾತನಾಡಿ ನಮ್ಮ ನಾಡ ಒಕ್ಕೂಟವು ಶಿಕ್ಷಣ, ಅರೋಗ್ಯ ಹಾಗೂ ಉದ್ಯೋಗ ಈ ಮೂರು ವಿಚಾರದ ಬಗ್ಗೆ ಕಾಳಜಿ ವಹಿಸಿದ್ದು ಶ್ಲಾಘನೀಯ.

ಪ್ರತಿಯೊಂದು ಬೆಳವಣಿಗೆಗೆ ಶಿಕ್ಷಣ ಅಗತ್ಯ. ಇವತ್ತಿನ ಕಾಲದಲ್ಲಿ ಸಮಾಜ ಉನ್ನತ ಸ್ಥಿತಿಗೆ ಹೋಗಲು ಕಾರಣ ಶಿಕ್ಷಣ ಮತ್ತು ಸಂಸ್ಕಾರ. ಆದ್ದರಿಂದ ನಮ್ಮ ನಾಡ ಒಕ್ಕೂಟವು ಶಿಕ್ಷಣದ ಬಗ್ಗೆ ಮಹತ್ವ ನೀಡುತ್ತಿದೆ. ಅಲ್ಲದೆ ಅರೋಗ್ಯದ ಬಗ್ಗೆ ಮಾಹಿತಿ ಹಾಗೂ ಉದ್ಯೋಗದ ಬಗ್ಗೆ ಮಾರ್ಗದರ್ಶನ ಈ ಮೂರು ಕಾರ್ಯವನ್ನು ಮಾಡುವ ನಮ್ಮ ನಾಡು ಒಕ್ಕೂಟದ ಕಾಳಜಿ ಮಹತ್ವವಾದದ್ದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಡಾ. ರಿಝ್ವಾನ್ ಅಹ್ಮದ್ ಕಾರ್ಕಳ ಇವರು ವಹಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌ. ಝಮೀರ್ ಅಹ್ಮದ್ ರಶಾದಿಯವರ ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು. ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿಯವರು ಸ್ವಾಗತ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷರು ರಾಜೇಶ್ ಕಾವೇರಿ, ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಕುಂದಾಪುರದ ನಿರ್ದೇಶಕರು ಕಿರಣ್ ಕ್ರಾಸ್ತಾ, ಉದ್ಯಮಿ ಸತೀಶ್ ಕಿಣಿ ಬೆಳ್ವೆ, ಜೆಸಿಐ ಕುಂದಾಪುರ ಸಿಟಿ ಪೂರ್ವಾಧ್ಯಕ್ಷರು ರಾಘವೇಂದ್ರ ಚರಣ್ ನಾವಡ, ಉದ್ಯಮಿ ಚೇರಿಯಬ್ಬ ಸಾಹೇಬ್ ಗುಲ್ವಾಡಿ, ಪ್ಲೇಸೆಂಟ್ ಮಾಲಕರಾದ ಬಶೀರ್ ಅಹ್ಮದ್ ಕೋಟ ಎನ್.ಎನ್.ಓ ಉಡುಪಿ ಜಿಲ್ಲಾಧ್ಯಕ್ಷರಾದ ಮುಷ್ತಾಕ್ ಅಹ್ಮದ್ ಬೆಳ್ವೆ, ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಇನಾಯತುಲ್ಲಾ ಶಾಬಂದ್ರಿ ಭಟ್ಕಳ ಹಾಗೂ ಇತರರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೇನ್ ಕಾರ್ಕಳ, ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೂಡಬಿದ್ರೆ, ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಅಜ್ಮಲ್ ಶಿರೂರು, ತಾಲೂಕು ಅಧ್ಯಕ್ಷರುಗಳು ಹಾಗೂ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷರಾದ ಮುಜಾವರ್ ಅಬು ಮುಹಮ್ಮದ್ ಕುಂದಾಪುರ ವಂದಿಸಿದರು. ಫಾಝಿಲ್ ಅಹ್ಮದ್ ಆದಿಉಡುಪಿ ನಿರೂಪಿಸಿದರು. ಸಮಾರಂಭದಲ್ಲಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಮತ್ತು ಸಮಾಜ ಸೇವಕರು ಭಾಗವಹಿಸಿದರು.