ಡೈಲಿ ವಾರ್ತೆ: 01 ಡಿಸೆಂಬರ್ 2022

ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ವಿಚಾರ: ಸರಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ ಎಂದ ಸಿಎಂ ಬೊಮ್ಮಾಯಿ!


ಬೆಂಗಳೂರು : ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಶಫಿ ಸಅದಿ ರಾಜ್ಯದ 10 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ಆರಂಭಿಸಲು ಉದ್ದೇಶಿಸಿರುವ ಕುರಿತು ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ. ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಕ್ಫ್ ಮಂಡಳಿಯ ಅಧ್ಯಕ್ಷರು ಏನು ಹೇಳಿದ್ದಾರೆ ಎಂಬ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದು ಅವರ ವೈಯಕ್ತಿಕ ನಿಲುವು ಇರಬಹುದು. ಸರ್ಕಾರದ ನಿಲುವು ಅಲ್ಲ. ವಕ್ಫ್ ಮಂಡಳಿಯ ಅಧ್ಯಕ್ಷರು ತಮ್ಮ ಆಲೋಚನೆಗಳ ಬಗ್ಗೆ ನನ್ನೊಂದಿಗೆ ಮಾತನಾಡಲಿ ಎಂದಿದ್ದಾರೆ.

ರಾಜ್ಯದಲ್ಲಿ ಸರ್ಕಾರ ತಲಾ 2.5ಕೋಟಿ ವೆಚ್ಚದಲ್ಲಿ ಹತ್ತು ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪಿಸು ಮುಂದಾಗಿದೆ ಎಂಬ ವಕ್ಫ್ ಮಂಡಳಿ ಅಧ್ಯಕ್ಷರ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಂಡ ನಂತರ ಮುಖ್ಯಮಂತ್ರಿ ಈ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ವಕ್ಫ್ ಮಂಡಳಿ ಅಧ್ಯಕ್ಷ ಶಫಿ ಸಅದಿ, ಸರ್ಕಾರದ ಅನುದಾನದಿಂದ ಕಾಲೇಜು ಆರಂಭಿಸಲಾಗುವುದು.

ಇದರಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರವೇ ಅವಕಾಶ ಇರುತ್ತದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕಾಲೇಜು ಆರಂಭಿಸುವ ಕುರಿತು ನಾನು ಮಾತನಾಡಿದ್ದೆ. ನಮ್ಮ ಮಂಡಳಿಯಲ್ಲಿ ₹ 25 ಕೋಟಿ ಹಣವಿದೆ. ಒಂದು ಕಾಲೇಜಿಗೆ ₹ 2.5 ಕೋಟಿ ಹಣ ನೀಡಿ ರಾಜ್ಯದ 10 ಜಿಲ್ಲೆಗಳಲ್ಲಿ ಕಾಲೇಜು ಆರಂಭಿಸುತ್ತೇವೆ. ಈ ಬಗ್ಗೆ ಸಚಿವರೊಂದಿಗೂ ಚರ್ಚಿಸಿದ್ದೆ ಎಂದಷ್ಟೇ ಹೇಳಿದ್ದಾಗಿ ತಿಳಿಸಿದ್ದಾರೆ.