ಡೈಲಿ ವಾರ್ತೆ: 01 ಡಿಸೆಂಬರ್ 2022

ಎಕ್ಸಲೆಂಟ್ ಕ್ರೀಡಾಂಗಣದಲ್ಲಿ‌ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಭೂಮಿ ಪೂಜೆ

ಕುಂದಾಪುರ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವು ಡಿ. 8, 9, ಹಾಗೂ 10 ರಂದು ನಡೆಯಲಿದೆ.
ಈ ನಿಟ್ಟಿನಲ್ಲಿ ಡಿಸೆಂಬರ್ 1 ರಂದು ಗುರುವಾರ ಪೂರ್ವಾಹ್ನ ಎಕ್ಸಲೆಂಟ್ ಕ್ರೀಡಾಂಗಣದ ಭೂಮಿ ಪೂಜೆಯ ಸಂಕಲ್ಪ ಕಾರ್ಯಕ್ರಮವನ್ನು ಸ್ಥಳೀಯ ಪುರೋಹಿತರಾದ ಶಂಕರನಾರಾಯಣ ಉಡುಪ ನೆರೆವೇರಿಸಿದರು.



ಭೂಮಿ ಪೂಜೆಯ ಸಂಕಲ್ಪದಲ್ಲಿ ಪಾಲ್ಗೊಂಡ ಎಂ.ಎಂ. ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಅವರು ಮಾತನಾಡಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಕ್ರೀಡಾಂಗಣದ ಭೂಮಿ ಪೂಜೆಯನ್ನು ಮಾಡಿದ್ದೇವೆ. ಈ ನಮ್ಮ ಸಂಸ್ಥೆಯಲ್ಲಿ ನಡೆಯುವ ವಾಲಿಬಾಲ್ ಪಂದ್ಯಾಟದಲ್ಲಿ ಯಾವುದೇ ವಿಘ್ನಗಳು ಬಾರದ ಹಾಗೆ ವಿಘ್ನೇಶ್ವರನ ಪೂಜೆಯೊಂದಿಗೆ ಪ್ರಾರಂಭಿಸಿದ್ದೇವೆ.
ಯಾವುದೇ ವಿಘ್ನಗಳು ಬಂದರೂ ಆ ತೊಡಕುಗಳನ್ನ ನಿವಾರಿಸಿ ಈ ಒಂದು ಕಾರ್ಯಕ್ರಮವು ರಾಜ್ಯದಲ್ಲಿಯೇ ಉತ್ತಮ ಕ್ರೀಡಾಕೂಟವಾಗಿ ಮೂಡಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿ‌ ಶುಭಹಾರೈಸಿದರು.

ಸುಜ್ಞಾನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ ನಮ್ಮ ಸಂಸ್ಥೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಮಾಡಲು ಅವಕಾಶವನ್ನು ಕಲ್ಪಿಸಿ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಇದು ನಮ್ಮ ಸೌಭಾಗ್ಯ.
ಈ ವಾಲಿಬಾಲ್ ಪಂದ್ಯಾಟವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಪ್ರಪ್ರಥಮವಾಗಿ ನಡೆಯುವುದರಿಂದ ನಾವು ಅದ್ದೂರಿಯಾಗಿ ಮಾಡುವ ಕನಸಿನೊಂದಿಗೆ ಆದರ ಪೂರ್ವ ತಯಾರಿ ಮಾಡುತ್ತಿದ್ದೇವೆ.

ಇಂದು ಕ್ರೀಡಾಂಗಣದ ಭೂಮಿ ಪೂಜೆಯನ್ನು ನೆರವೇರಿಸಿದ್ದೇವೆ.
ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಅದ್ದೂರಿಯಾಗಿ ಮಾಡುವ ಉದ್ದೇಶದಿಂದ ಒಂದು ಪುರ ಮೆರವಣಿಗೆಯನ್ನು ಇಟ್ಟುಕೊಂಡಿದ್ದೇವೆ. 8 ರಂದು ಮಧ್ಯಾಹ್ನ 3 ಗಂಟೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಯಿಂದ ಪುರ ಮೆರವಣಿಗೆ ಹೊರಡಲಿದೆ. ಈ ಪುರ ಮೆರವಣಿಗೆಯಲ್ಲಿ ಸುಮಾರು 3 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಈ ಪುರ ಮೆರವಣಿಗೆಯನ್ನು ಕುಂದಾಪುರ ಚಿನ್ಮಯ್ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಉಮೇಶ್ ಪುತ್ರನ್ ಚಾಲನೆ ನೀಡಲಿದ್ದಾರೆ.

ಡಿ. 8 ರಂದು ಸಂಜೆ 5:00 ಗಂಟೆಗೆ ಎಕ್ಸಲೆಂಟ್ ಕ್ರೀಡಾಂಗಣದಲ್ಲಿ ವಾಲಿಬಾಲ್ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ.
ಇದರ ಉದ್ಘಾಟನೆಯನ್ನು ಮಾನ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಇವರು ಉದ್ಘಾಟಿಸಲಿದ್ದಾರೆ.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಕ್ರೀಡಾಳುಗಳಿಂದವಂದನೆ ಸ್ವೀಕಾರ ಮಾಡಲಿದ್ದು,
ಕರ್ನಾಟಕ ವಿಧಾನ ಪರಿಷತ್ ಶಾಸಕ ಎಸ್ ಎಲ್ ಭೋಜೇಗೌಡ ಅಂಗಣ ಉದ್ಘಾಟನೆ ಮಾಡಲಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಕೇಂದ್ರ ಸಚಿವೆ, ಉಡುಪಿ ಸಂಸದರಾದ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಎಸ್ ಅಂಗಾರ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್, ಶಿಕ್ಷಣ ಸಚಿವ ಬಿಸಿ ನಾಗೇಶ್, ಆಗಮಿಸಲಿದ್ದಾರೆ ಎಂದು ಡಾ. ರಮೇಶ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕಿ ಜಯಲತಾ, ಹಾಗೂ ದೈಹಿಕ ಶಿಕ್ಷಕ ವೃಂದದವರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು, ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಸತೀಶ್ ಕುಮಾರ್ ಸ್ವಾಗತಿಸಿ ವಂದಿಸಿದರು.