ಡೈಲಿ ವಾರ್ತೆ: 31 ಡಿಸೆಂಬರ್ 2022

ಬಸ್ ಚಾಲಕನಿಗೆ ಹೃದಯಾಘಾತ: ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ: 9 ಸಾವು, 32 ಮಂದಿಗೆ ಗಾಯ

ಗುಜರಾತ್: ಬಸ್‌ ಹಾಗೂ ಕಾರಿನ ನಡುವಿನ ಭೀಕರ ಅಪಘಾತದಲ್ಲಿ 9 ಮಂದಿ ದಾರುಣ ಅಂತ್ಯ ಕಂಡ ಘಟನೆ ಗುಜರಾತ್ ನ ನವ್ಸಾರಿ ಜಿಲ್ಲೆಯ ಹೆದ್ದಾರಿಯಲ್ಲಿ ಶುಕ್ರವಾರ (ಡಿ.30) ರಾತ್ರಿ ನಡೆದಿದೆ ಎಂದು ವರದಿಯಾಗಿದೆ.

ಬಸ್ಸಿನಲ್ಲಿದ್ದವರು ಸೂರತ್‌ ನಲ್ಲಿನ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಾಸ್‌ ಆಗುತ್ತಿದ್ದರು. ಈ ವೇಳೆ ಬಸ್ಸಿನ ಚಾಲಕನಿಗೆ ಹೃದಯಾಘಾತ ಸಂಭವಿಸಿ ಎಸ್‌ ಯುವಿ ಕಾರಿಗೆ ಢಿಕ್ಕಿ ಹೊಡೆದು ನಿಯಂತ್ರಣವಾಗಿ ರಭಸದಿಂದ ಮುನ್ನುಗಿದೆ. ಪರಿಣಾಮ ಕಾರಿನಲ್ಲಿದ್ದವರು ಎಲ್ಲರೂ ಸಾವನ್ನಪ್ಪಿದ್ದು, ಘಟನೆಯಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

32 ಮಂದಿಗೆ ಗಾಯಗಳಾಗಿದ್ದು, ಇದರಲ್ಲಿ 11 ಮಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೃದಯಾಘಾತವಾದ ಬಳಿಕ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.