ಡೈಲಿ ವಾರ್ತೆ:26 ಫೆಬ್ರವರಿ 2023
ಬಂಟ ಸಮುದಾಯದ ಬೇಡಿಕೆಗಳು ಈಡೇರದಿದ್ದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿಯನ್ನು ಸೋಲಿಸುತ್ತೇವೆ: ಐಕಳ ಹರೀಶ್ ಶೆಟ್ಟಿ
ಬಂಟ ಸಮುದಾಯಕ್ಕೆ ನಿಗಮ ಘೋಷಣೆ ಹಾಗೂ ಸಮುದಾಯವನ್ನು 3ಬಿಯಿಂದ 2ಎಗೆ ವರ್ಗಾಯಿಸದಿದ್ದಲ್ಲಿ ಕರಾವಳಿಯಲ್ಲಿ ಬಂಟ ಸಮುದಾಯದ ಮುಖಂಡರನ್ನು ಚುನಾವಣಾ ಕಣಕ್ಕಿಳಿಸಿ 3–4 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಎಚ್ಚರಿಕೆಯನ್ನು ಬಂಟ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಘೋಷಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ, ಬಂಟ ಸಮುದಾಯದ ಮೀಸಲಾತಿಗೆ 3ಬಿಯಿಂದ 2ಎಗೆ ಸಮುದಾಯವನ್ನು ವರ್ಗಾಯಿಸುವಂತೆ ಹಾಗೂ ಬಂಟರ ಯಾನೆ ನಾಡವರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನೇಕ ವರ್ಷಗಳಿಂದ ಸರಕಾರದ ಮುಂದೆ ಬೇಡಿಕೆ ಇರಿಸಲಾಗಿತ್ತು. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಿಎಂ ಬೊಮ್ಮಾಯಿಯವರಿಗೂ ಬೇಡಿಕೆ ಇಡಲಾಗಿತ್ತು. ಆದರೆ ಬಜೆಟ್ ನಲ್ಲಿಯಾಗಲಿ, ವಿಧಾನಸಭೆಯ ಅಧಿವೇಶನದಲ್ಲಾಗಲಿ ನಮಗೆ ಸ್ಪಂದನೆ ದೊರಲಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಉತ್ತರ ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಟರು ಯಾವತ್ತೂ ಯಾರಲ್ಲೂ ಬೇಡುವುದಿಲ್ಲ. ತಮ್ಮ ಬೇಡಿಕೆ ಈಡೇರಿಕೆಗಾಗಿ ಬಾವುಟ ಹಿಡಿದು ಬೀದಿಗಿಳಿದು ಹೋರಾಟ, ಪ್ರತಿಭಟನೆಯನ್ನೂ ಮಾಡುವುದಿಲ್ಲ. ಆದರೆ, ತಕ್ಷಣವೇ ನಮ್ಮ ಎರಡು ಬೇಡಿಕೆಗಳು ಈಡೇರದಿದ್ದಲ್ಲಿ ಈ ಚುನಾವಣೆಯಲ್ಲಿ ರಾಜ್ಯ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುತ್ತದೆ. ಜಾಗತಿಕವಾಗಿ ಇರುವ ಎಲ್ಲಾ ಬಂಟ ಸಮುದಾಯದವರನ್ನು ಊರಿಗೆ ಕರೆಸಿ ಚುನಾವಣೆಯಲ್ಲಿ ಬಂಟರ ಶಕ್ತಿ ಪ್ರದರ್ಶನ ಮಾಡಲಾಗುತ್ತದೆ ಎಂದು ಐಕಳ ಹರೀಶ್ ಶೆಟ್ಟಿ ಹೇಳಿದರು.