ಡೈಲಿ ವಾರ್ತೆ:17 ಆಗಸ್ಟ್ 2023
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ
” ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಆಜಾನ್ ಖಾನ್ ಎಂಬ ಬಾಲಕನ ಆಸೆ ಈಡೇರಿಸಿದ ಶಿವಮೊಗ್ಗ ಪೊಲೀಸ್ ಇನ್ಸ್ಪೆಕ್ಟರ್…..!” ಇನ್ಸ್ಪೆಕ್ಟರ್ ಆಗಬೇಕೆನ್ನುವ ಬಾಲಕನ ಕನಸನ್ನ ನನಸು ಮಾಡಿದ ಠಾಣಾಧಿಕಾರಿಗಳು…..!” ಹತ್ತು ಲಕ್ಷದ ಜನರಲ್ಲಿ ಒಬ್ಬರಿಗೆ ಕಾಣುವ ಈ ಭಯಾನಕ ಕಾಯಿಲೆ….!” ಪುಟ್ಟ ಬಾಲಕನನ್ನು ಕಿತ್ತುಕೊಳ್ಳದಿರು ಪ್ಲೀಸ್ ವಿಧಿಯೇ….?”
ಶಿವಮೊಗ್ಗ :ಆ ಪುಟ್ಟ ಬಾಲಕನ ಕನಸು ಈಡೇರಿಸಿದ ಶಿವಮೊಗ್ಗ ಪೊಲೀಸ್ ಅಧಿಕಾರಿಗಳು…, ಪೊಲೀಸ್ ಗತ್ತಿನಲ್ಲಿ ಪೊಲೀಸ್ ಠಾಣೆಗೆ ಆಗಮಿಸಿದ ಪುಟ್ಟ ಇನ್ಸ್ಪೆಕ್ಟರ್ ಹುಟ್ಟಿದಾಗಿಂದ ಕನಸು ಕಂಡ ಆ ಬಾಲಕನ ಆಸೆ ಈಡೇರಿದೆ. ಅಂತಹ ಅಪರೂಪದ ಘಟನೆ ನಡೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಮುಗ್ಧ ಮಕ್ಕಳು ದೊಡ್ಡ ದೊಡ್ಡ ಆಸೆಯನ್ನು ಇಟ್ಟುಕೊಳ್ಳುವುದು ಸಹಜ ಆದರೆ ಕೆಲವೊಂದು ಉತ್ತಮ ಮಕ್ಕಳಿಗೆ ವಿಧಿಯ ಹಣೆಬರವೇ ಬೇರೆ ಬರೆದಿರುತ್ತಾನೆ ಎನ್ನಲು ಈ ಬಾಲಕನೆ ಜ್ವಲಂತ ಸಾಕ್ಷಿ. ಬದುಕು ಕಟ್ಟಿಕೊಂಡು ಬದುಕಿನಲ್ಲಿ ಏನಾದರೂ ಸಾಧನೆ ಮಾಡ್ಬೇಕು, ಛಲ ದೊಂದಿಗೆ ಪ್ರಪಂಚದ ಬೆಳಕು ಕಂಡ ಈ ಪುಟ್ಟ ಬಾಲಕನಿಗೆ ಭವಿಷ್ಯ ಕಟ್ಟಿಕೊಡುವುದರ ಜೊತೆಗೆ ಜೀವನವನ್ನು ಕೂಡ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದೆಡೆ ನೋವು ,ಇನ್ನೊಂದೆಡೆ ಹತಾಶೆ ಹಾಗೂ ಈ ಬಾಲಕನ ವಿಚಿತ್ರ ಕಾಯಿಲೆಗೆ ಕುಟುಂಬವೇ ಮರುಗಿದೆ. ಸಾಂತ್ವನದ ಧ್ವನಿಗಳು ಕುಟುಂಬಕ್ಕೆ ಭದ್ರವಾಗಿ ನಿಲ್ಲುವಂತಹ ಶಕ್ತಿ ತುಂಬಬೇಕಾಗಿದೆ. ಅದೇ ರೀತಿ ಪುಟ್ಟ ಬಾಲಕನ ಪೊಲೀಸ್ ಅಧಿಕಾರಿಯಾಗುವ ಕನಸುಗಳು ಕುಟುಂಬಸ್ಥರು ಈಡೇರಿಸಿದ್ದಾರೆ ದೊಡ್ಡಪೇಟೆ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಒಂದು ದಿನ ಸಾಂಕೇತಿಕವಾಗಿ ಪುಟ್ಟ ಬಾಲಕನ್ನ ಅಧಿಕಾರಕ್ಕೆ ವಹಿಸಲಾಯಿತು ಪುಟ್ಟ ಬಾಲಕನ ಕನಸಂತೆ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾನೆ ಅದೇ ರೀತಿ ಪುಟ್ಟ ಬಾಲಕನ ಕನಸಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.
ಆಜಾನ್ ಖಾನ್ ಬಿನ್ ತಬ್ರೇಜ್ ಖಾನ್, 8 1/2 ವರ್ಷ, 1ನೇ ತರಗತಿ, ವಾಸ ಸೂಳೆಬೈಲು, ಶಿವಮೊಗ್ಗ ಟೌನ್ ಹಾಲಿ ವಾಸ ಎನ್ ಆರ್ ಪುರ ರಸ್ತೆ, ಬಾಳೆಹೊನ್ನೂರು ಚಿಕ್ಕಮಗಳುರು ಈ ಬಾಲಕನು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಾಲಕನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ ಇರುತ್ತದೆ. ಆದ್ದರಿಂದ ಬಾಲಕನ ಮತ್ತು ಆತನ ಪೋಷಕರ ಕೋರಿಕೆ ಮೇರೆಗೆ ದಿನಾಂಕ 16-08-2023 ರಂದು ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾಲಕ ಆಜಾನ್ ಖಾನ್ ನಿಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಡಲಾಯಿತು.
ಇಲ್ಲೊಬ್ಬ ಬಾಲಕ ಸಹ ದೊಡ್ಡಪೇಟೆ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಒಂದು ದಿನ ಸಾಂಕೇತಿಕವಾಗಿ ಕಾರ್ಯ ನಿರ್ವಹಿಸಲು ಅವಕಾಶ ಪಡೆದದ್ದು ಕುತೂಹಲಕ್ಕೆ ಕಾರಣವಾಗಿತ್ತು.
ಈ ಹುಡುಗನಿಗೆ ಈಗ ಎಂಟೂವರೆ ವರ್ಷ. ಬೆಳೆದು ಸರ್ಕಲ್ ಇನ್ಸ್‌ಪೆಕ್ಟರ್ ಆಗಬೇಕೆಂಬ ಕನಸು. ಆದರೆ, ಹುಟ್ಟಿದ ಮೂರು ತಿಂಗಳಿಂದ ಶುರುವಾದ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಬಾಲಕನ ಆಸೆಯಂತೆ ಸಮವಸ್ತ್ರ ಧರಿಸಿ ಇನ್ಸ್‌ಪೆಕ್ಟರ್ ಕುರ್ಚಿಯ ಮೇಲೆ ಕುಳಿತು ಅಧಿಕಾರ ಚಲಾಯಿಸಿದ ಕ್ಷಣಕ್ಕೆ ದೊಡ್ಡಪೇಟೆ ಠಾಣೆ ಬುಧವಾರ ಸಾಕ್ಷಿಯಾಯಿತು.
ಮಗನ ಗತ್ತು ನೋಡಿ ತಾಯಿ ಕಣ್ಣೀರು!ಮೂಲತಃ ಶಿವಮೊಗ್ಗದವರೇ ಆದರೂ ಬಾಳೆಹೊನ್ನೂರಿನಲ್ಲಿ ನೆಲೆಸಿರುವ ತಾಬ್ರೇಜ್ ಖಾನ್ ಮತ್ತು ನಗ್ಮಾ ಖಾನ್ ಅವರ ಪುತ್ರ ಅಜಾನ್ ಖಾನ್ ಅವರಿಗೆ ದೊಡ್ಡಪೇಟೆ ಠಾಣೆಯಲ್ಲಿ ಏಕ್ ದಿನ್ ಕಾ ಇನ್ಸ್‌ಪೆಕ್ಟರ್ ಆಗುವ ಅವಕಾಶವನ್ನು ಪೊಲೀಸ್ ಇಲಾಖೆ ನೀಡಿತ್ತು. ಮಗನು ಖಾಕಿ ತೊಟ್ಟು ಗತ್ತಿನಲ್ಲಿ ನಡೆಯುತ್ತಿರುವುದನ್ನು ನೋಡಿದ ತಾಯಿ ಕಣ್ಣೀರಾಗಿದ್ದರು. ಕುಟುಂಬದವರ ಕಣ್ಣಾಲಿ ತೇವಗೊಂಡಿದ್ದವು.
10 ಲಕ್ಷ ಜನರಿಗೆ ಒಬ್ಬರಲ್ಲಿ ಕಂಡುಬರುವ ಈ ಕಾಯಿಲೆಗೆ ಚಿಕಿತ್ಸೆಯೂ ಅಪರೂಪವೇ ಆಗಿದೆ. ಅಜಾನ್ ಹಸುಳೆಯಾಗಿದ್ದಾಗಿಂದಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಆಂಜಿಯೋಗ್ರಾಂಮಾಡಿ ಕಾರಣವನ್ನು ಪತ್ತೆ ಹಚ್ಚಲಾ ಗಿದೆ. ಈತ ಸಂಪೂರ್ಣ ಗುಣಮುಖನಾಗಬೇಕಾದರೆ ಹೃದಯ ಮತ್ತು ಶ್ವಾಸಕೋಶದ ಕಸಿಯಾಗಬೇಕು. ಅದಕ್ಕೆ ದಾನಿಗಳು ಬೇಕು. ಜತೆಗೆ ಲಕ್ಷಾಂತರ ಹಣವೂ ಖರ್ಚಾಗುತ್ತದೆ.
ಬಾಲಕನ ಶಿಸ್ತಿಗೆ ಇನ್ಸ್ಪೆಕ್ಟರ್ ಸಂತಸ:
ಸಾಂಕೇತಿಕವಾಗಿ ಪುಟ್ಟ ಬಾಲಕನನ್ನು ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಲಾಯಿತು ಆದರೆ ಪುಟ್ಟ ಬಾಲಕನ ಶಿಸ್ತು ನೋಡಿ ಅಲ್ಲಿನ ಠಾಣಾಧಿಕಾರಿಗಳು ಸಂತಸಪಟ್ಟಿದ್ದಾರೆ ಇಂತಹ ಬಾಲಕನ ಚಾತುರ್ಯ ಹಾಗೂ ಧೈರ್ಯ ಅದಲ್ಲದೆ ಮಾತಿನ ವರ್ಚಸ್ಸು ಉನ್ನತ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟರು.
ನಾಳೆಯಿಂದಲ್ಲ, ಇವತ್ತಿನಿಂದಲೇ ಕೆಲಸ ಮಾಡು!ಬಾಲಕ ಒಂದು ದಿನದ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಪೊಲೀಸ್ ಅಧಿಕಾರಿಗಳಾದ ಬಾಲರಾಜ್, ಡಿ ಟಿ ಪ್ರಭು, ಅಂಜನ್ ಕುಮಾರ್ ಇತರರಿದ್ದರು. ಈ ವೇಳೆ ಬಾಲಕ ಅಜಾನ್ ಕಳ್ಳತನ ಯಾಕೆ ಮಾಡಿದ್ರಿ ಎಂದು ವ್ಯಕ್ತಿಯೊಬ್ಬರಿಗೆ ಕೇಳುವ ಪ್ರಸಂಗ ಎಲ್ಲರ ಗಮನ ಸೆಳೆಯಿತು. ಕಳ್ಳತನ ಯಾಕೆ ಮಾಡಿದ್ರಿ, ಕೆಲಸ ಮಾಡ್ಬೇಕು ಎಂದು ಬಾಲಕ ಹೇಳಿದಾಗ, ಆ ವ್ಯಕ್ತಿ ನಾಳೆಯಿಂದ ಕೆಲಸ ಮಾಡ್ತೀನಿ ಎಂದು ಹೇಳಿದೆ. ಆಗ ಅಜಾನ್ ನಾಳೆಯಿಂದಲ್ಲ, ಇವತ್ತಿನಿಂದಲೇ ಕೆಲಸ ಮಾಡಬೇಕು ಎಂದು ಹೇಳಿದ್ದರು ವಿಶೇಷವಾಗಿತ್ತು.
ಒಟ್ಟಾರೆಯಾಗಿ ಭಯಾನಕ ಕಾಯಿಲೆಗೆ ತುತ್ತಾಗಿರುವ ಬಾಲಕ ಬೇಗ ಗುಣಮುಖರಾಗಿ ಅವನ ಕನಸ ಈಡೇರುವಂತೆ ಆಗಲಿ ಪ್ರಪಂಚದಲ್ಲಿ ಎಲ್ಲರಂತೆಯೇ ಬದುಕಲಿ ಎನ್ನುವ ಹಾರೈಕೆ ಪತ್ರಿಕೆಯದು.