ಡೈಲಿ ವಾರ್ತೆ: 30/NOV/2023

ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ. ರಾಷ್ಟ್ರೀಯ ‘ಮಾಧ್ಯಮ ಲೋಕ ಪ್ರಶಸ್ತಿ’ ಪುರಸ್ಕೃತರು, ಅಂಕಣಕಾರರು, ಪತ್ರಕರ್ತರು

ಕುಂದಾಪುರ: ಕೈಲ್ಕೆರೆ ಶಾಲಾ ವಾರ್ಷಿಕೋತ್ಸವ

ಸುದ್ದಿ:ಕುಂದಾಪುರ
“ಕೈಲ್ ಕೆರೆ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಲೇಖನ…!”

“ಇದು ವಿದ್ಯಾ ದೇಗುಲ, ಕೈಮುಗಿದು ಒಳಗೆ ಬಾ…..! ನಮ್ಮ ಭವಿಷ್ಯವನ್ನು ರೂಪಿಸುವ ಮೊದಲ ಮೆಟ್ಟಿಲು ಈ ಶಾಲೆ, ಕೈ ಹಿಡಿದು ವಿದ್ಯಾಭ್ಯಾಸದ ಜೋಳಿಗೆಗೆ ಅಕ್ಷರವನ್ನ ತುಂಬಿದ ಪ್ರಥಮ ಶಾಲೆ, ಬಾಲ್ಯದಲ್ಲಿ ತಪ್ಪು ಒಪ್ಪುಗಳನ್ನ ಮನ್ನಿಸಿದಂತಹ ಶಿಕ್ಷಕರು, ಆಕಾರವಿಲ್ಲದಂತಹ ನಮ್ಮನ್ನ “ಅಕ್ಷರ” ಎಂಬ ಮೂರ್ತಿಯನ್ನಾಗಿ ಕೆತ್ತಿಸಿ, ನಮಗೊಂದು ರೂಪ ನೀಡಿರುವುದು “ಶಿಕ್ಷಕರು” . “ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ” ಎನ್ನುವಂತೆ ನಮ್ಮ ಬಾಳಿಗೆ, ನಮ್ಮ ಬದುಕಿಗೆ, ಮೊದಲ ಗುರುಗಳಾಗಿ ಪ್ರಪಂಚಕ್ಕೆ ವಿದ್ಯಾ ,ಬುದ್ಧಿ ,ಸ್ಥಾನವನ್ನು ನೀಡುವಲ್ಲಿ ಹೆಜ್ಜೆ ಗುರುತಾದ ಗುರು ಎಂಬ ದೇವರಿಗೆ ನಮನಗಳೊಂದಿಗೆ….,!”

ಸುಂದರ ಪ್ರಕೃತಿಯ ಮಧ್ಯೆ ಶೈಕ್ಷಣಿಕ ಹಾದಿಯನ್ನ ಮುನ್ನಡೆಸುತ್ತಿರುವ ಸರ್ಕಾರಿ ಶಿಕ್ಷಣ ಸಂಸ್ಥೆ ಅದು. ಕರಾವಳಿಯ ಕಡಲತಡಿಯ ಶೈಕ್ಷಣಿಕ ಬೋಧನೆಯ ಕೇಂದ್ರ ಸ್ಥಾನ, ಗ್ರಾಮೀಣ ಭಾಗದ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದ ಮೂಲಸ್ಥಾನ…, ಶೈಕ್ಷಣಿಕ ತಳಹದಿಯ ಗ್ರಾಮೀಣ ಭಾಗದಲ್ಲಿ ತನ್ನನ್ನ ಪುಟ್ಟ ಶಾಲೆ ಎಂದು ಕರೆದರು. ನನಗೆ ಜಾಗವಿಲ್ಲದಂತಹ ಅಂದಿನ ಪರಿಸ್ಥಿತಿಯಲ್ಲಿ ನಾನು ಎಲ್ಲೋ ಹುಟ್ಟಿ ಎಲ್ಲೋ ನೆಲೆಯದೆ. ಆದರೆ ನನಗಿರುವಂತಹ ಆತ್ಮಸ್ಥೈರ್ಯ, ಬೇರೆ ಯಾವ ಸರಕಾರಿ ಇಲಾಖೆಗೂ ಇರಲಾರದು ಅಂದುಕೊಂಡಿದ್ದೇನೆ. ಆದರೂ ನನ್ನ ಹುಟ್ಟು, ನನ್ನ ಜೀವನ, ಇವೆಲ್ಲವೂ ಕಲ್ಪಿತವಾಗಿರುವುದು ನನ್ನ ಅಸಂಖ್ಯಾತ ಶಿಕ್ಷಣ ಅಭಿಮಾನಿಗಳು… ಗ್ರಾಮೀಣ ಭಾಗದಲ್ಲಿ ಹುಟ್ಟಿ, ಗ್ರಾಮೀಣ ಜನರ ಬುದ್ಧಿವಂತಿಕೆಯ ಮಟ್ಟವನ್ನ ನಾನು ದೂರಿಂದಲೇ ಪರೀಕ್ಷಿಸುತ್ತಾ, ಅವರಿಗೆ ಉತ್ತಮವಾದ ಬೋಧನೆಯ ಶಿಕ್ಷಣವನ್ನ ನೀಡುವುದು ನನ್ನ ಆಧ್ಯ ಕರ್ತವ್ಯವಾಗಿತ್ತು. ತೊದಲು ನುಡಿಯ ಕಂದಮ್ಮಗಳಿಗೆ ಶಿಕ್ಷಣವನ್ನು ಕೊಟ್ಟೆ, ಸಂಸ್ಕೃತಿಯನ್ನ ಕೊಟ್ಟೆ, ಆಚಾರ ವಿಚಾರಗಳನ್ನು ಕೊಟ್ಟೆ, ಆದರೆ ಏನು ಮಾಡೋಣ, ಆರ್ಥಿಕ ಪರಿಸ್ಥಿತಿ ನಲುಗಿ ಹೋದಾಗ, ಬಡತನವೇ ಈ ಗ್ರಾಮದಲ್ಲಿ ಆವರಿಸಿದಾಗ ದೈವ ದೇವರುಗಳ ದೃಷ್ಟಿಯಿಂದ, ಊರಿನವರ ಹಾಗೂ ಗಣ್ಯ ವ್ಯಕ್ತಿಗಳ ಸಹಕಾರದಿಂದ ನನ್ನನ್ನು ಬೆಳೆಸಿ, ಪೋಷಿಸಿ, ನನಗೊಂದು ಇರಲು ನೆಲೆ ಮಾಡಿಕೊಟ್ಟರು. ನೆಲೆ ಮಾಡಿ ನನಗೊಂದು ಅರ್ಥಗರ್ಭಿತವಾದ ಸ್ಥಾನ ಕೊಟ್ಟು, ನನಗೆ ಉ. ಜಿ. ಪಂ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೈಲ್ಕೆರೆ ಎಂದು ನಾಮಕರಣ ಮಾಡಿದರು. ಅಲ್ಲಿಂದ ನನ್ನ ಹುಟ್ಟಿನ ಜೀವನ ಪ್ರಾರಂಭವಾಯಿತು. ನನಗೆ ಇನ್ನೊಂದು ಅಡ್ಡ ಹೆಸರು ಅಥವಾ ಮೂಲ ಹೆಸರು ಎಂದರೆ ಮಾವಿನ ಕಟ್ಟೆ. ನನ್ನ ಹುಟ್ಟು ಹೆಸರು ಮಾವಿನಕಟ್ಟೆಯಾದರೂ ನನ್ನ ಮೂಲ ಹೆಸರು ಕೈಲ್ಕೆರೆ ಎನ್ನುವುದೇ ಸಂತಸ.
ಹೌದು ವಿದ್ಯಾಭಿಮಾನಿಗಳೇ, ಇಂದು ನಾವು ಸಂಭ್ರಮದಿಂದ ವರದಿ ಮಾಡಲು ಹೊರಟಿರುವ ವಿಚಾರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ” ಕೈಲ್ಕೆರೆ”ಯ ಇತಿಹಾಸದ ತಳಹದಿ. ಏಕೆಂದರೆ, ಶಾಲೆಯ ಹುಟ್ಟು, ಬೆಳವಣಿಗೆ ಆರ್ಥಿಕತೆ, ವಿದ್ಯಾಭ್ಯಾಸ, ಇವೆಲ್ಲವೂ ನಮ್ಮ ಜೊತೆಗಿನ ಅವಿನಾಭಾವ ಸಂಬಂಧವನ್ನ ಬೆಸೆದು ಹೋಗುತ್ತದೆ.
ಇಲ್ಲಿನ ಗ್ರಾಮೀಣ ಜನರ ಬೆಳೆ ಭತ್ತ ,ತೆಂಗು ,ಅಡಿಕೆ, ತರಕಾರಿ ಸಸ್ಯಗಳು ನಾವು ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಇವುಗಳು ಅಗ್ರಪಂತಿಯಲ್ಲಿರುತ್ತವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಬಹು ದೊಡ್ಡ ಗ್ರಾಮ ಎಂದು ಹೆಗ್ಗಳಿಕೆಗೆ ಪಾತ್ರವಾದ ಮತ್ತು ಸುವರ್ಣ ಗ್ರಾಮೋದಯ ಎನ್ನುವ ಬಿರುದಾಂಕಿತ, ಸಹಕಾರಿ ಸಂಘದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಹುಟ್ಟೂರು ಹುಟ್ಟೂರಾಗಿರುವ ಮೊಳಹಳ್ಳಿ ಗ್ರಾಮದ ನಾಲ್ಕನೇ ವಾರ್ಡ್ ನಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೈಲ್ಕೆರೆ, ಕುಂದಾಪುರ ತಾಲೂಕು, ಈ ಶಾಲೆಯ ಸಂಭ್ರಮದ ವಾರ್ಷಿಕೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಡಿಸೆಂಬರ್ 16/10/2023 ಶನಿವಾರದಂದು ಕೈಲ್ಕೆರೆ ಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.

ಕೈಲ್ಕೆರೆ ಶಾಲೆಯ ಇತಿಹಾಸ:-
ಹಳ್ಳಿಗಾಡಿನ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ನಲುಗಿ ಹೋದಂತಹ ಸಂದರ್ಭದಲ್ಲಿಯೇ, ಊರ ಮಕ್ಕಳ ಅನುಕೂಲಕ್ಕಾಗಿ, ಕೈಲ್ಕೆರೆ ಯ ರೈಸ್ ಮಿಲ್ಲಿನ ಸಣ್ಣ ಕಟ್ಟಡ ಒಂದರಲ್ಲಿ 10/09/1953 ರಲ್ಲಿ ಕೃತಕ ಶಾಲೆಯನ್ನು ಆರಂಭಿಸಲಾಯಿತು. ತದನಂತರದಲ್ಲಿ ಶಿಕ್ಷಣ ಪ್ರೇಮಿಗಳಾದ ದಿ. ಶಿವರಾಮ ಹೆಗಡೆಯವರ ಮುತುವರ್ಜಿಯೊಂದಿಗೆ,1956 ರಲ್ಲಿ ಮೊದಲು ಸಣ್ಣ ಕಟ್ಟಡದಲ್ಲಿ ಶಾಲೆ ಪ್ರಾರಂಭವಾಯಿತು. ತದನಂತರದಲ್ಲಿ,ಅವರ ಅಧೀನದಲ್ಲಿರುವ ಸ್ವಂತ ಜಾಗದಲ್ಲಿ ಶಾಲೆಯನ್ನ ಕಟ್ಟಲು ದೇಣಿಗೆಯಾಗಿ ಶಾಲೆಗೆ ನೀಡಿದರು. ಅಷ್ಟರಲ್ಲಿ,ಸರ್ಕಾರದ ಅನುಮತಿಯೊಂದಿಗೆ ಉಡುಪಿ ಜಿಲ್ಲಾ ಪಂಚಾಯತ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೈಲ್ಕೆರೆ ಎಂದು ನಾಮಕರಣ ಗೊಂಡಿತ್ತು. ಕೈಲ್ಕೆರೆ ಶಾಲೆಯ ಪ್ರಾರಂಭದ ದಿನದಲ್ಲಿ ಮೊದಲು ಹಳ್ನಾಡು ಸಂಜೀವ್ ಶೆಟ್ಟಿ ಎನ್ನುವರು ಮುಖ್ಯೋಪಾದ್ಯರಾಗಿ ನೇಮಕ ಆದರು. ಏಕೋಪಾಧ್ಯಾಯ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಹಂತದಲ್ಲಿ 100 ಮಕ್ಕಳಿಗೆ ಪ್ರತಿಷ್ಠಿತವಾಗಿ ವಿದ್ಯಾಭ್ಯಾಸವನ್ನು ಕಲಿಸಿದ್ದರು. ಶ್ರೀ ಮಹಾಲಿಂಗ ಮತ್ತು ಚಿತ್ತೆಗಾರ ಶಿಕ್ಷಕರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿ, ಇನ್ನಷ್ಟು ಪ್ರಾಬಲ್ಯತೆ ಮತ್ತು ಶಿಕ್ಷಣದ ಹಂಬಲವನ್ನ ತುಂಬಿದರು. ಸಂಜೀವ ಶೆಟ್ಟಿ ಅವರ ವರ್ಗಾವಣೆಯ ನಂತರ ಮುಖ್ಯೋಪಾಧ್ಯಾಯರಾಗಿ ರತ್ನಾಕರ್ ಶೆಟ್ಟಿ ಅವರು ಈ ಶಾಲೆಗೆ ಬಂದ ನಂತರ, ವಿಶಿಷ್ಟ ರೀತಿಯಲ್ಲಿ ಬೋಧನಾ ಕ್ರಮ, ಮಕ್ಕಳಲ್ಲಿನ ಕೌಶಲ್ಯ, ಶಿಸ್ತುಬದ್ಧ ಶೈಕ್ಷಣಿಕ ತಳಹದಿ, ಶಾಲೆಯ ಸುಂದರ ಬೋಧನಾ ಕ್ರಮ, ಇವೆಲ್ಲವನ್ನ ಕಲ್ಪಿಸುವಲ್ಲಿ ಸಫಲರಾದರು. ತದನಂತರ ಈ ಶಾಲೆಯಲ್ಲಿ ಕಾರ್ಯನಿರ್ವಹಿಸಿದರ ಪೈಕಿ ಮೈಯ ಬಳಗಾರ ,ನಿತ್ಯಾನಂದ ಶೆಟ್ಟಿ ಚಂದ್ರಶೇಖರ್ ಶೆಟ್ಟಿ, ಕೊಯ್ಕಾಡಿ , ಸುಧಾಕರ್ ಶೆಟ್ಟಿ,ಚಂದ್ರಶೇಖರ್ ಶೆಟ್ಟಿ ಮರತೂರು, ಗೋವಿಂದ ಮತ್ತು ರಾಜು ಶಿಕ್ಷಕರು ನಿಸ್ವಾರ್ಥ ಸೇವೆಯನ್ನ ಈ ಶಾಲೆಯಲ್ಲಿ ಸಲ್ಲಿಸಿದ್ದಾರೆ. ಶಾಲೆಯ ಬೌದ್ಧಿಕ ಮತ್ತು ಶೈಕ್ಷಣಿಕ ತಳಹದಿ ನೀಡುವಲ್ಲಿ ಶಿಕ್ಷಕರ ಸಹಕಾರ ಮುಂಚೂಣಿಯಲ್ಲಿದೆ. ಗ್ರಾಮೀಣ ಭಾಗದ ಮಕ್ಕಳು ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕಲಿತು ಉನ್ನತ ಸ್ಥಾನಕೇರಿದ್ದಾರೆ. ಅದೇ ರೀತಿ ಈ ಶಾಲೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸುವುದರೊಂದಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಇವೆಲ್ಲವೂ ಮೂಲ ತಳಹದಿ ಸರ್ಕಾರಿ ಶಾಲೆ ಎನ್ನುವುದೇ ಸಂತಸ…!” ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಸಕ್ರಿಯದಿಂದ ಕಂಡುಕೊಳ್ಳುತ್ತಿರುವ, ಸರ್ಕಾರಿ ಶಾಲೆಯ ಪಠ್ಯ ಕ್ರಮ ಮಕ್ಕಳನ್ನ ಬೌದ್ಧಿಕ ಶಿಕ್ಷಣದತ್ತ ಕೊಂಡೊಯ್ಯುತ್ತದೆ. ಅದಲ್ಲದೆ ಬಲಾಡ್ಯರನ್ನಾಗಿಸುವ ತಳಹದಿಯು ಕೂಡ ಶಿಕ್ಷಣದ ರೂಪರೇಷೆಯನ್ನ ಉನ್ನತೀಕರಣಗೊಳಿಸಲು ಸರ್ಕಾರಿ ಶಾಲೆಗಳು ಪ್ರಸ್ತುತವಾಗಿದೆ.
ಸರಿಸುಮಾರು 2019ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಮುಖ್ಯೋಪಾದರಾಗಿ ಸಂತೋಷ್‌ ಶೆಟ್ಟಿ ಅವರ ಆಗಮನವಾಯಿತು. ಇವರ ಆಗಮನದಿಂದ ಮಕ್ಕಳ ಸಂಖ್ಯೆ ಕಡಿಮೆ ಇದ್ದ ಶಾಲೆ, ಬೆಳವಣಿಗೆಗೆ ಸಾಕ್ಷಿ ಆಯಿತು, ಅದಲ್ಲದೆ ಶಾಲೆಯಾ ಸರ್ವತೋಮುಖ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರವನ್ನು ವಹಿಸಿದರು ಮತ್ತು ಎಸ್ ಡಿ ಎಂ ಸಿ ಹಾಗೂ ಗ್ರಾಮಸ್ಥರನ್ನು ಕರೆದು, ಶಾಲೆಯ ಅಭಿವೃದ್ಧಿ ಬಗ್ಗೆ ಇಂಚಿಂಚು ಮಾಹಿತಿ ಕಲೆಹಾಕಿ ಶ್ರಮಿಸಲು ಮುಂದಾದರು. ಇವರು ಮುಖ್ಯೋಪಾಧ್ಯರಾಗಿ ಚಾರ್ಜ್ ತೆಗೆದುಕೊಂಡ ಮೇಲೆ ಶಾಲೆಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ ರಚನೆ, ತರಗತಿ ಕೋಣೆ ಗಳಿಗೆ ಟೈಲ್ಸ್ ಅಳವಡಿಕೆ, ನಲಿ ಕಲಿ ಪೀಠೋಪಕರಣ ಅಳವಡಿಕೆ ಹಾಗೂ ಹೂ ಸಸ್ಯ ತೋಟ ರಚನೆ, ದ್ವಜಸ್ತಂಬ ನವೀಕರಣ, ಶಾಲೆಯ ಕಾಂಪೌಂಡ್ ಉನ್ನತೀಕರಣ, ಶಾಲೆಗಳಿಗೆ ಸುಣ್ಣಬಣ್ಣ ಅಳವಡಿಕೆ, ವಿದ್ಯಾಭ್ಯಾಸದ ಅನುಕೂಲಕ್ಕೆ ತಕ್ಕಂತೆ ಟಿವಿ, ಕಂಪ್ಯೂಟರ್ ಸೌಲಭ್ಯ, ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸೇರಿದಂತೆ ವಿವಿಧ ಪರಿಕರಗಳ ಉಚಿತ ಕೊಡುಗೆ, ವಿದ್ಯಾರ್ಥಿಗಳ ಕಲಿಕಾ ಗ್ರೀನ್ ಬೋರ್ಡ್ ಹೀಗೆ ವಿವಿಧ ಹಂತದ ಸೌಲಭ್ಯಗಳನ್ನ ಶಾಲೆಗೆ ತರುವಲ್ಲಿ ಇವರ ಶ್ರಮ ಬೆಟ್ಟದಷ್ಟಿದೆ ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಶಾಲೆಗೆ ಇನ್ನಷ್ಟು ಕೀರ್ತಿ ತರುವ ನಿಟ್ಟಿನಲ್ಲಿ ಸಹ ಶಿಕ್ಷಕಿಯಾಗಿ ಶ್ರೀಮತಿ ಮಂಜುಳಾ ಕಾರ್ಯನಿರ್ವಹಿಸಿದರೆ, ಅತಿಥಿ ಶಿಕ್ಷಕರಾಗಿ ಕಿಶನ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಶಾಲೆಯ ವಿವಿಧ ರೀತಿಯ ಪರಿಕರಗಳು ಶಾಲೆ ತುಂಬಿ ತುಳುಕುತ್ತಿದ್ದರೆ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸುವಲ್ಲಿ ಶಿಕ್ಷಕರ ಶ್ರಮ ಬಹಳಷ್ಟು ಇದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ಸೇರಿಸುವಂಥವರ ಸಂಖ್ಯೆ ದುಪ್ಪಟ್ಟಾಗಲಿ ಅನ್ನೋದೇ ಪೋಷಕರ ಹಾಗೂ ಹಳೆ ವಿದ್ಯಾರ್ಥಿಗಳ ಆಶಯವಾಗಿದೆ.


ಶಾಲಾ ಶೈಕ್ಷಣಿಕ ಚಟುವಟಿಕೆ ಮತ್ತು ಸುಂದರವಾದ ಪರಿಸರದಲ್ಲಿ ಕೈಲ್ಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾರ್ಯನಿರ್ವಹಿಸುತ್ತಿದೆ. ಅಕ್ಷರ ಜ್ಞಾನದೊಂದಿಗೆ ಮಕ್ಕಳ ಭೌತಿಕ ವಿಕಾಸಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮಕ್ಕಳಲ್ಲಿನ ನವ ಚೈತನ್ಯ ತುಂಬುವ ಮೂಲಕ ವಿವಿಧ ರೀತಿಯ ಕ್ರಮವನ್ನ ಕೈಗೊಳ್ಳಲಾಗಿದೆ ಅದಲ್ಲದೆ ಶಿಕ್ಷಣದಲ್ಲೂ ಕೂಡ ಹೊಸತನವನ್ನು ತುಂಬುವಲ್ಲಿ ಶಿಕ್ಷಕರ ತಂಡ ಸದಾ ತಲ್ಲಿನರಾಗುತ್ತಿದ್ದಾರೆ ಗ್ರಾಮೀಣ ಭಾಗದ ಕಿರಿಯ ಪ್ರಾಥಮಿಕ ಶಾಲೆ ಇನ್ನಷ್ಟು ಅಭಿವೃದ್ಧಿಯ ಕಾರ್ಯಗಳೊಂದಿಗೆ ಮತ್ತು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುವುದರೊಂದಿಗೆ ಮಕ್ಕಳ ಸರ್ಕಾರಿ ಶಾಲೆಯ ಉರುಪು ಮತ್ತಷ್ಟು ಇಮ್ಮಡಿಗೊಳಿಸಬೇಕಿದೆ ಅದಲ್ಲದೆ ಡಿಸೆಂಬರ್ 16ನೇ ತಾರೀಕು ಶಾಲಾ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯಲು ಕ್ಷಣಗಣನೆ ಆರಂಭವಾಗಿದೆ. ಶಾಲೆಯಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆ ಕಾರ್ಯಕ್ರಮಗಳು ಮತ್ತು ಕ್ರೀಡೆ ಗಳಿಗೆ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಇನ್ನಿತರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲು ಹಳೆ ವಿದ್ಯಾರ್ಥಿ ಸಂಘದವರು ಹಾಗೂ ಶಾಲಾ ಎಸ್ ಡಿ ಎಂ ಸಿ ವರ್ಗದವರು, ಶಿಕ್ಷಕರು ವಿದ್ಯಾರ್ಥಿಗಳು,ಊರಿನವರ ಸಹಕಾರದೊಂದಿಗೆ ವಾರ್ಷಿಕೋತ್ಸವವನ್ನು ಆಚರಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಸರಿಸುಮಾರು 19 ವರ್ಷಗಳ ನಂತರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಡೆಸಲು ಪಣತೊಡುತ್ತಿದ್ದಾರೆ ಸರ್ಕಾರಿ ಶಾಲೆಯ ಉದ್ದೇಶ ಮತ್ತು ಶಾಲೆಯ ಕಲಿಕಾ ಮಟ್ಟವನ್ನ ಆಧರಿಸಿ ವಿಶಿಷ್ಟ ರೀತಿಯಲ್ಲಿ ಹೆಸರನ್ನು ಗಳಿಸುವುದರೊಂದಿಗೆ, ಗ್ರಾಮೀಣ ಭಾಗದ ಪುಟ್ಟ ಶಾಲೆ ಇನ್ನಷ್ಟು ಕೀರ್ತಿಪತಾಕೆಯನ್ನು ಹಾರಿಸಲಿ ಎನ್ನುವುದೇ ಪತ್ರಿಕೆಯ ಉದ್ದೇಶ.

)