ಡೈಲಿ ವಾರ್ತೆ: 13/ಮೇ /2024

ಕ್ಯೂನಲ್ಲಿ ಬನ್ನಿ ಎಂದಿದ್ದಕ್ಕೆ ವೈಎಸ್‍ಆರ್ ಶಾಸಕನಿಂದ ಕಪಾಳಮೋಕ್ಷ!

ಹೈದರಾಬಾದ್: ಕ್ಯೂನಲ್ಲಿ ಬಂದು ಮತ ಹಾಕಲು ಹೇಳಿದ್ದಕ್ಕೆ ವೈಎಸ್‍ಆರ್ ಕಾಂಗ್ರೆಸ್‍ನ  ಶಾಸಕ ಅನ್ನಾಬತ್ತುನಿ ಶಿವಕುಮಾರ್  ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಆಂಧ್ರ ಪ್ರದೇಶದ ತೆನಾಲಿ ಮತಗಟ್ಟೆಯಲ್ಲಿ ನಡೆದಿದೆ.

ಈ ವೇಳೆ ಮತದಾರ ಸಹ ಶಾಸಕರ ಕೆನ್ನೆಗೆ ಭಾರಿಸಿದ್ದಾರೆ. ಇದರಿಂದ ಶಾಸಕರ ಬೆಂಬಲಿಗರು ಮತದಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲಿಸರು ಮತದಾರನನ್ನು ರಕ್ಷಿಸಿದ್ದಾರೆ. ತೆನಾಲಿಯ ಶಾಸಕ, ಸದ್ಯ ಅಭ್ಯರ್ಥಿಯಾಗಿ ಅನ್ನಾಬತ್ತುನಿ ಶಿವಕುಮಾರ್ ಸ್ಪರ್ಧೆ ಮಾಡಿದ್ದಾರೆ. ಇಂದು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ.

ಶಾಸಕರು ಹಲ್ಲೆ ನಡೆಸಿರುವ ವೀಡಿಯೋವನ್ನು ತೆಲುಗುದೇಶಂ ಪಾರ್ಟಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮತದಾರನ ಮೇಲೆ ಹಲ್ಲೆ ಮಾಡಿದ ವೈಸಿಪಿ ಶಾಸಕನಿಗೆ ತಿರುಗಿ ಹೊಡೆದ ಸಾಮಾನ್ಯ ಮತದಾರ. ಪ್ರಜೆಗಳ ಆಕ್ರೋಶದಲ್ಲಿ ವೈಎಸ್‍ಆರ್ ಪಕ್ಷ ಕೊಚ್ಚಿ ಹೋಗುತ್ತಿದೆ ಎಂದು ಪೋಸ್ಟ್ ಮಾಡಿದೆ.

ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.