ಡೈಲಿ ವಾರ್ತೆ: 08/ಜುಲೈ /2024

ಕರಾವಳಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಜಾರಿ – ಮುಂದಿನ ಮೂರು ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ.!

ಕರಾವಳಿ: ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ತತ್ತರಗೊಂಡಿವೆ. ಮತ್ತೆ ಮೂರು ಗಂಟೆಯ ಒಳಗಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಕಳೆದ 24 ಗಂಟೆಗಳಲ್ಲಿ ದಾಖಲೆ ಮಳೆ ಬಿದ್ದಿದ್ದು, ಈಗಾಗಲೇ ಈ ಭಾಗದ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಉಡುಪಿಯಲ್ಲಿ 24 ಗಂಟೆಯಲ್ಲಿ 210.5 ಮೀ.ಮೀ ಮಳೆ ಬಿದ್ದ ಪರಿಣಾಮ 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಕರ್ನಾಟಕದ ಕರಾವಳಿ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ ಇಂದು ಭಾರೀ ಮಳೆಯಾಗಲಿದ್ದು ಐಎಂಡಿ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಮುಂದಿನ 4-5 ದಿನ ಈ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.