ಡೈಲಿ ವಾರ್ತೆ: 04/ಆಗಸ್ಟ್/2024

ಯಾಡ್ತಾಡಿಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ: ವರ್ಷ್ ಇಡೀ ಗೆದ್ದಿಗಳಲ್ಲಿ ಶ್ರಮ ಪಟ್ಟ ಹೋರಿಗಳನ್ನ ಗೌರವಿಸುದೆ ಯೆರ್ಥ – ಮನು ಹಂದಾಡಿ

ಕುಂದಾಪುರ :
ವರ್ಷ್ ಇಡೀ ಗೆದ್ದಿ ಹೂಡಿ ಕಷ್ಟಪಟ್ಟ ಹೋರಿಗಳಿಗೆ ನಟ್ಟಿ ಎಲ್ಲ ಮುಗ್ದ್ ಮೇಲ್ ಅಕೇರಿಗೆ ಹಬ್ಬು ಮಾಡೂದೇ ಎರ್ತ ಕೊಡುದ್ ಅಂದೇಳಿ. ಆವತ್ ಬೆಳ್ಗಾಮುಂಚಿಗ್ ಹೋರಿಗ್ಳನ್ ಕೆರಿಲ್ ಮೀಸಿ, ಮೈಗೆಲ್ಲ ಎಣ್ಣಿ ಉದ್ದಿ, ಉದ್ದಿನ್ ಕಾಳ್ ಕಡ್ದ್ ಎಳ್ಳೆಣ್ಣಿ ಕಲ್ಸಿ ತಿಂಬುಕ್ ಕೊಡ್ತ್ರ್. ಕಡಿಕೆ ಇನ್ನೂ ಬ್ಯಾರ್ ಬ್ಯಾರೆ ತಿಂಡಿ ಕೊಡ್ತ್ರ್. ಅವತ್ ಮನ್ಯಂಗೂ ಹಬ್ಬ. ಪಾಯ್ಸ ಮಾಡ್ತ್ರ್… ಇದು ಕುಂದಾಪ್ರ ಕನ್ನಡ ರಾಯಭಾರಿ ಎಂದೇ ಖ್ಯಾತರಾದ ಮನು ಹಂದಾಡಿಯವರ ನುಡಿ.

ಚಿತ್ರ ನಟ ದಿ. ಸುನಿಲ್ ರವರ ಯಡ್ತಾಡಿಯ ನಿವಾಸದಲ್ಲಿ ಆ. 4 ರಂದು ಭಾನುವಾರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಪ್ರಧಾನವಾದ ಕುಂದಾಪುರ, ಕರಾವಳಿ ಪ್ರದೇಶಗಳಲ್ಲಿ ಜನರು ಪ್ರಕೃತಿ, ಪ್ರಾಣಿಗಳನ್ನೂ ಹೇಗೆ ಗೌರವಿಸುತ್ತಿದ್ದರು ಎಂಬ ಬಗ್ಗೆ ವಿವರಿಸಿದ ಅವರು, ಇಂತಹ ಹಬ್ಬಗಳ ಮೂಲಕವಾದರೂ ಅಂತಹ ಉತ್ತಮ ಆಚರಣೆಗಳನ್ನು ಜೀವಂತವಾಗಿರಿಸಿಕೊಂಡು ಕಿರಿಯ ಜನಾಂಗಕ್ಕೆ ಶ್ರಮ ಜೀವಿಗಳ ಕಾಯಕಗಳನ್ನು ಪರಿಚಯಿಸಬೇಕು ಎಂದು ಕರೆ ನೀಡಿದರು.

ಶುಭ ಕೋರಿ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪ್ರ ಕನ್ನಡ ಭಾಷೆ ವಿಶಿಷ್ಟವಾಗಿರುವಂತೆಯೇ ಅದು ನಮ್ಮ ಬದುಕು ಭಾವನೆಗಳ ಪ್ರತೀಕ. ಕುಂದಾಪ್ರ ಕನ್ನಡ ಭಾಷೆ ಮಾತಾಡಲು ನಾವು ಹಿಂಜರಿಯಬಾರದು. ಉತ್ತರ ಕರ್ನಾಟಕ ಮಂದಿ ವಿಧಾನ ಸೌಧದಲ್ಲೂ ಅವರ ಭಾಷೆ ಬಿಡುವುದಿಲ್ಲ. ನಮಗೂ ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನವಿರಬೇಕು ಎಂದು ಹೇಳಿದರು.

ಕಂಬಳದ ಸರದಾರ ಬಾರಕೂರು ಶಾಂತಾರಾಮ ಶೆಟ್ಟಿ ಕಂಬಳದ ಹೋರಿಗಳಿಗೆ ಎರ್ತದ ತಿನಿಸುಗಳನ್ನು ನೀಡಿ, ಕುಂದಾಪ್ರ ಕನ್ನಡದ ಮೇಲಿನ ನನ್ನ ಅಭಿಮಾನ, ಪ್ರೀತಿಯಿಂದಲೇ ನಾನು ಈ ಮಣ್ಣಿನ ಸಂಸ್ಕೃತಿಯ ಪ್ರತೀಕವಾದ ಕಂಬಳವನ್ನು ನಡೆಸಿದೆ. ಇದೇ ನನಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಮಾತ್ರವಲ್ಲ, ಹಲವು ಮಂದಿ ಪ್ರೇರಣೆ ಪಡೆದು ಉತ್ತಮ ಕಂಬಳ ಓಟಗಾರರೂ ಮುನ್ನೆಲೆಗೆ ಬಂದರು ಎಂದರು.
ಎಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಲಾಕ್ಷೇತ್ರದ ಕಿಶೋರ್ ಕುಮಾರ್, ಜನಸೇವಾ ಟ್ರಸ್ಟ್ ನ ವಸಂತ ಗಿಳಿಯಾರ್ ಶುಭ ಹಾರೈಸಿದರು. ಕೆ. ಸಿ. ರಾಜೇಶ್ ಸ್ವಾಗತಿಸಿ, ವಂದಿಸಿದರು.