ಡೈಲಿ ವಾರ್ತೆ: 20/Sep/2024
ದಾವಣಗೆರೆ: ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳಿಂದ ಕಲ್ಲುತೂರಾಟ – ಇಬ್ಬರು ಪೊಲೀಸರಿಗೆ ಗಾಯ
ದಾವಣಗೆರೆ, ಸೆ.19: ದಾವಣಗೆರೆಯ ಬೇತೂರ ರಸ್ತೆಯ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆದಿದ್ದು, ಘಟನೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಗುರುಬಸವರಾಜ್ ಹಾಗೂ ಕ್ರೈಂ ವಿಭಾಗದ ಪೊಲೀಸ್ ಕಾನ್ಸ್ ಸ್ಟೇಬಲ್ ರಘು ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಕಾಂಗ್ರೆಸ್ ಮುಖಂಡ ಆಯೂಬ್ ಪೈಲ್ವಾನ್ ಸೇರಿದಂತೆ ಪ್ರಮುಖ ಮುಸ್ಲಿಂ ನಾಯಕರು ಯುವಕರನ್ನ ನಿಯಂತ್ರಣ ಮಾಡಲು ಮುಂದಾದರು.
ಇನ್ನು ಕಲ್ಲುತೂರಿದ ಆರೋಪಿಗಳಿಗೆ ಪೊಲೀಸರು ಶೋಧಕಾರ್ಯ ನಡೆಸಿದರು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚಿಸಿದ ಪೊಲೀಸರು
ಇನ್ನು ಕಲ್ಲು ತೂರಿದ ಕಿಡಿಗೇಡಿಗಳನ್ನ ಪೊಲೀಸರು ಓಡಿಸಿಕೊಂಡು ಹೋಗಿದ್ದು, ಸಿಸಿಟಿವಿ ದೃಶ್ಯ ಸಂಗ್ರಹಿಸಿ ಆರೋಪಿಗಳ ಪತ್ತೆಕಾರ್ಯ ನಡೆದಿದೆ. ಸಧ್ಯ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಂಗಡಿ ಮುಗ್ಗಟ್ಟುಗಳನ್ನ ಪೊಲೀಸರು ಮುಚ್ಚಿಸಿದ್ದಾರೆ. ಇತ್ತ ಶಾಂತಿ ಟಾಕೀಸ್ ರಸ್ತೆ ಹಾಗೂ ಎನ್ ಆರ್ ರಸ್ತೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ ಮಾಡಲಾಗಿದೆ.
ಪ್ರಚೋದನಾತ್ಮಕ ಭಾಷಣವೇ ಗಲಾಟೆಗೆ ಕಾರಣ-ಎಸ್‌ಪಿ ಉಮಾ ಪ್ರಶಾಂತ್:
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಉಮಾ ಪ್ರಶಾಂತ್, ‘ಬೇತೂರ ರಸ್ತೆ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದೇವೆ. ನಿಷೇಧಾಜ್ಞೆ ಜಾರಿ ಬಗ್ಗೆ ಡಿಸಿ ಜೊತೆ ಚರ್ಚೆ ನಡೆಸಲಾಗಿದೆ. ಪ್ರಚೋದನಾತ್ಮಕ ಭಾಷಣವೇ ಗಲಾಟೆಗೆ ಕಾರಣವಾಗಿದೆ. ನಿನ್ನೆ ಒಂದು ಕೋಮಿನವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಇನ್ನೊಂದು ಕೋಮಿನವರು ವಿರೋಧ ವ್ಯಕ್ತಪಡಿಸಿದ್ದರು. ಎರಡೂ ಕಡೆಯವರಿಂದ ದೂರು ದಾಖಲಾಗಿದೆ, ಕ್ರಮಕೈಗೊಳ್ತೇವೆ ಎಂದರು.