ಡೈಲಿ ವಾರ್ತೆ: 14/JAN/2025
ಕುಂದಾಪುರ: ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಬಂಧನ
ಕುಂದಾಪುರ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟಕ್ಕೆ ಯತ್ನಿಸಿದ ನಾಲ್ಕು ಮಂದಿಯನ್ನು ಸೆನ್ ಅಪರಾಧ ದಳ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಬೈಂದೂರು ತಾಲೂಕು ಮರವಂತೆ ಬೀಚ್ ಸಮೀಪ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇದಿತ ಮಾದಕ ವಸ್ತು ಎಂಡಿಎಂಎ ಪೌಡರ್ ಅನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತ ಆರೋಪಿಗಳನ್ನು ಅಬ್ರಾರ್ ಶೇಖ್, ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್, ಮೊಹಮ್ಮದ್ ಜಿಯಾಮ್ ಬೆಳ್ಳಿ, ನೌಮನ್, ಸಜ್ಜಾದ್ ಮುಸ್ತಕೀಮ್ ಕೆವಾಕ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 15.59 ಮಿಲಿ ಗ್ರಾಂ ತೂಕದ 78 ಸಾವಿರ ರೂ. ಮೊತ್ತದ ಎಂಡಿಎಂಎ ಪೌಡರ್ ಹಾಗೂ ಕೃತ್ಯಕ್ಕೆ ಬಳಸಿದ್ದ 5 ಮೊಬೈಲ್, ಮಾದಕ ವಸ್ತು ಮಾರಾಟಕ್ಕೆ ಬಳಸಿದ ಕಾರು ಸಹಿತ 11,28,000 ರೂ. ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಪೌಡರ್ ಅನ್ನು ಬೆಂಗಳೂರಿನ ದಾವೂದ್ ಮತ್ತು ಇಸಾಕ್ ಅವರಿಂದ ಖರೀದಿಸಿರುವ ಬಗ್ಗೆ ತನಿಖೆ ವೇಳೆ ಪೊಲೀಸರಲ್ಲಿ ಹೇಳಿದ್ದಾರೆ.
ಈ ಕಾರ್ಯಚರಣೆಯಲ್ಲಿ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ್, ಸೆನ್ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪವನ್ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್ , ದಿಕ್ಷೀತ್, ನಿಲೇಶ್, ಮಾಯಪ್ಪ ಗಡದೆ ಮತ್ತು ಸುದೀಪ್ ರವರ ತಂಡ ಭಾಗವಹಿಸಿದ್ದರು.
ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.