


ಡೈಲಿ ವಾರ್ತೆ: 12/ಮಾರ್ಚ್ /2025


ಉಡುಪಿ: ಗರುಡ ಗ್ಯಾಂಗ್ ಸದಸ್ಯ ಕುಖ್ಯಾತ ಆರೋಪಿ ಇಸಾಕ್ ಕಾಲಿಗೆ ಪೊಲೀಸರಿಂದ ಗುಂಡೇಟು

ಮಣಿಪಾಲ: ಇತ್ತೀಚೆಗಷ್ಟೇ ಮಣಿಪಾಲ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಗರುಡ ಗ್ಯಾಂಗ್ ನ ಕುಖ್ಯಾತ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಉಡುಪಿ ಜಿಲ್ಲೆಯ ಹಿರಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.ಇದಕ್ಕೂ ಮುನ್ನ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದ ಇಸಾಕ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದ. ಇದೀಗ ಇಸಾಕ್ ಮತ್ತು ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಇಸಾಕ್ ಹಾಗೂ ಇತರರ ಬಂಧನಕ್ಕಾಗಿ ಮಣಿಪಾಲ ಪೊಲೀಸರು ಮತ್ತು ಮಲ್ಪೆ ಪೊಲೀಸರ ತಂಡ ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ತೆರಳಿತ್ತು.
ಅಲ್ಲಿಂದ ಆರೋಪಿ ಇಸಾಕ್ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಬಂಧಿಸಿ ಕರೆತರಲಾಗುತ್ತಿತ್ತು. ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ, ಸಂಜೆ 7.15ಕ್ಕೆ ಆರೋಪಿ ಇಸಾಕ್ ತನಗೆ ವಾಂತಿ ಹಾಗೂ ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಮಾಡಿದ್ದಾನೆ. ಮೂತ್ರ ವಿಸರ್ಜನೆ ನಂತರ ಏಕಾಏಕಿ ಈತನೊಂದಿಗೆ ಇದ್ದ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರನ್ನು ತಳ್ಳಿ ಅವರ ಮೇಲೆ, ಆತನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್ ಅನ್ನು ಬಳಸಿ ಬಲವಾಗಿ ಸುತ್ತಿ ದೂಡಿದ್ದಾನೆ.ನಂತರ ಇಬ್ಬರು ಪೊಲೀಸ್ ಉಪನಿರೀಕ್ಷಕರು ಹಿಡಿಯಲು ಪ್ರಯತ್ನಿಸಿದಾಗ ಅವರಿಗೆ ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.ಹೀಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಜೀಪ್ ನ ಗ್ಲಾಸ್ ಒಡೆದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಪೊಲೀಸ್ ನಿರೀಕ್ಷಕ ದೇವರಾಜ್ ಅವರು ಎಚ್ಚರಿಕೆ ನೀಡಿದ್ದು, ಕೇಳದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಕೂಡ ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆರೋಪಿ ಇಸಾಕ್ ಕಾಲಿಗೆ ಗುಂಡು ಹಾರಿಸಲಾಗಿದೆ. ಸದ್ಯ ಗಾಯಗೊಂಡ ಆರೋಪಿ ಇಸಾಕ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.