


ಡೈಲಿ ವಾರ್ತೆ: 13/ಮಾರ್ಚ್ /2025


ಕುಂಭಮೇಳ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ಸಂತ್ರಸ್ತರ ಕುಟುಂಬಕ್ಕೆ 1 ಕೋಟಿ ಪರಿಹಾರ ಹಣ ಜಮೆ

ಬೆಳಗಾವಿ| ಜನವರಿ 29 ರಂದು ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟಿದ್ದ ಬೆಳಗಾವಿ ಮೂಲದ ನಾಲ್ವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ.ನಂತೆ 1 ಕೋಟಿ ರೂ. ಪರಿಹಾರವನ್ನು ಉತ್ತರ ಪ್ರದೇಶ ಸರ್ಕಾರ ನೀಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪ್ರಯಾಗರಾಜ್ ಜಿಲ್ಲಾಧಿಕಾರಿ ರವಿ ಮಂಜರ್ ಅವರೊಂದಿಗೆ ಚರ್ಚಿಸಿದ ನಂತರ ಪರಿಹಾರದ ಮೊತ್ತವನ್ನು ನೇರವಾಗಿ ಮೃತರ ಕುಟುಂಬಗಳಾದ ಜ್ಯೋತಿ ಹತ್ತರವಾಡ, ಮೇಘಾ ಹತ್ತರವಾಡ, ಮಹಾದೇವಿ ಬಾವನೂರ ಮತ್ತು ಅರುಣ್ ಕೋಪರ್ಡೆ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಲೆಕ್ಕಿಗರ ಮೂಲಕ ಪರಿಶೀಲನೆ ಪ್ರಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜ.29 ರಂದು ಮೃತರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು.
ಪರಿಹಾರ ಘೋಷಿಸಿದಂತೆ ಕಾಲ್ತುಳಿತ ಸಂಭವಿಸಿದ 40 ದಿನಗಳ ಬಳಿಕ ಇಂದು ಪರಿಹಾರ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶ ಸರ್ಕಾರದಿಂದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಅಕೌಂಟ್‌ಗೆ ಹಣ ಜಮೆಯಾಗಿದೆ.ಈ ಕುರಿತು ಸ್ವತಃ ಡಿಸಿ ಮಾಹಿತಿ ಹಂಚಿಕೊಂಡಿದ್ದು, ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಪರಿಹಾರ ಮೊತ್ತ ಜಮೆಯಾಗಿದೆ. ನಾಲ್ವರಿಗೆ ತಲಾ 25 ಲಕ್ಷ ರೂ.ಯಂತೆ 1 ಕೋಟಿ ರೂ. ಪರಿಹಾರ ವಿತರಣೆಯಾಗಿದ್ದು, ರಾಜ್ಯ ಸರ್ಕಾರದಿಂದಲೂ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ವರದಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿಗಳು ಮತ್ತು ಮರಣ ಪ್ರಮಾಣಪತ್ರಗಳನ್ನು ಕಳುಹಿಸಲಾಗುವುದು ಎಂದು ಪ್ರಯಾಗ್‌ರಾಜ್ ಆಡಳಿತವು ಭರವಸೆ ನೀಡಿದೆ ಎಂದು ಅವರು ಹೇಳಿದರು.