ಡೈಲಿ ವಾರ್ತೆ: 26/ಏಪ್ರಿಲ್/2025

ಕಲಬುರಗಿ| ಎಟಿಎಂ ದರೋಡೆ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡೇಟು

ಕಲಬುರಗಿ: 2 ವಾರದ ಹಿಂದೆ ನಗರದ ವರ್ತುಲ ರಸ್ತೆಯ
ರಾಮನಗರ ಬಳಿಯ ಎಟಿಎಮ್ ದೋಚಿದ ಖದೀಮರ ಮೇಲೆ ಕಲಬುರಗಿ ಪೊಲೀಸರು ಎ.26ರ ಶನಿವಾರ ಬೆಳಂಬೆಳಿಗ್ಗೆ ಫೈರಿಂಗ್ ನಡೆಸಿದ್ದಾರೆ.

ಅರೆಸ್ಟ್ ಮಾಡಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಂದ ಫೈರಿಂಗ್ ನಡೆದಿದೆ ಎಂದು ತಿಳಿದುಬಂದಿದೆ.

ಕಲಬುರಗಿಯ ಬೇಲೂರ ಕ್ರಾಸ್ ಇಂಡಸ್ಟ್ರಿಯಲ್ ಏರಿಯಾ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದ್ದು, ತಸ್ಲಿಮ್ ಅಲಿಯಾಸ್ ತಸ್ಸಿ (28), ಶರೀಫ್ (22) ಪೊಲೀಸ್‌ ಫೈರಿಂಗ್ ನಲ್ಲಿ ಗಾಯಗೊಂಡ ಎಟಿಎಂ ದರೋಡೆಕೋರರು. ತಸ್ಲಿಮ್ ಮತ್ತು ಶರೀಫ್ ಇಬ್ಬರು ಹರಿಯಾಣ ಮೂಲದವರಾಗಿದ್ದಾರೆ.

ದರೋಡೆಕೋರರನ್ನು ಅರೆಸ್ಟ್ ಮಾಡಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಆತ್ಮರಕ್ಷಣೆಗಾಗಿ ಅವರ ಕಾಲುಗಳಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಪಿಎಸ್‌ಐ ಬಸವರಾಜ್ ಅವರು ಎ.ಟಿ.ಎಂ. ಕಳ್ಳರ ಮೇಲೆ ಫೈರಿಂಗ್ ನಡೆಸಿದ್ದಾರೆ. ಘಟನೆಯಲ್ಲಿ ಪೊಲೀಸ್‌ ಕಾನ್ಸ್ಟೇಬಲ್ ಗಳಾದ ಮಂಜು, ಫಿರೋಜ್, ರಾಜಕುಮಾ‌ರ್ ಅವರಿಗೂ ಗಾಯಗಳಾಗಿವೆ.

ಚಿಕಿತ್ಸೆ ಗಾಗಿ ಗಾಯಾಳು ಪೊಲೀಸ್ ಕಾನ್ಸ್ಟೇಬಲ್ ಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡೇಟು ತಿಂದ ಎ.ಟಿ.ಎಂ ಕಳ್ಳರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಲಬುರಗಿಯಲ್ಲಿ ಇದೆ ತಿಂಗಳು 9 ರಂದು ನಗರದ ವರ್ತುಲ ರಸ್ತೆಯ ರಾಮನಗರದ ಪೂಜಾರಿ ಚೌಕ್ ಬಳಿ ಎಸ್.ಬಿ.ಐ. ಎಟಿಎಂ ನಲ್ಲಿ ದರೋಡೆ ಆಗಿತ್ತು. ಇದೇ ಆರೋಪಿಗಳು 18 ಲಕ್ಷ ರೂ. ದೋಚಿಕೊಂಡು ಹೋಗಿದ್ದರು.