



ಡೈಲಿ ವಾರ್ತೆ: 22/MAY/2025


ಕೇರಳ ಸಮಾಜಂ ಉಡುಪಿ ಉದ್ಘಾಟನೆ:
ಜಗತ್ತಿಗೆ ಕೇರಳ ಸಮಾಜದ ಕೊಡುಗೆ ಅಪಾರ – ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ: ಕೇರಳ ಸಮಾಜಮ್ ಉಡುಪಿ ಇದರ ಉದ್ಘಾಟನಾ ಸಮಾರಂಭವು ಉಡುಪಿ ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು.
ನೂತನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು, ಇಡೀ ಜಗತ್ತಿಗೆ ಕೇರಳ ಸಮಾಜದ ಕೊಡುಗೆ ಅಪಾರ. ಯಾವುದೇ ದೇಶ, ರಾಜ್ಯಕ್ಕೆ ಹೋದರೂ ಕೇರಳಿಗರು ಸಿಗುತ್ತಾರೆ. ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ವಿಶಿಷ್ಟವಾದ ಕೊಡುಗೆಗಳನ್ನು ನೀಡುತ್ತಾ ವಿಶ್ವದ ಮೆಚ್ಚುಗೆಗೆ ಕೇರಳಿಗರು ಪಾತ್ರರಾಗಿದ್ದಾರೆ ಎಂದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಹಾಗೂ ಕೇರಳಿಗರ ಮಧ್ಯೆ ಭಾಷೆ ವಿಚಾರದಲ್ಲಿ ವ್ಯತ್ಯಾಸ ಇರಬಹುದು. ಆದರೆ ಆಚಾರ ವಿಚಾರದಲ್ಲಿ ಭಾವನಾತ್ಮಕವಾಗಿ ಬಹಳಷ್ಟು ಒಟ್ಟಾಗಿದ್ದೇವೆ. ಕೇರಳದಲ್ಲಿ ಅನುಸರಿಸಿಕೊಂಡು ಬರುತ್ತಿರುವ ಧಾರ್ಮಿಕ ಪದ್ಧತಿಯನ್ನೇ ಇಲ್ಲಿ ಕೂಡ ಅನುಸರಿಸಲಾಗುತ್ತಿದೆ. ಒಂದು ಸಮಾಜದ ಅಭಿವೃದ್ಧಿ, ಏಳಿಗೆ ಆಗಬೇಕಾದರೆ ಇಂತಹ ಸಂಘ ಸಂಸ್ಥೆಗಳು ಬಹಳ ಮುಖ್ಯ. ಈ ನೂತನ ಸಂಸ್ಥೆ ಬಹಳಷ್ಟು ಎತ್ತರಕ್ಕೆ ಬೆಳೆದು, ಸಮಾಜದ ಅಭಿವೃದ್ಧಿ ಶ್ರಮಿಸಲಿ ಎಂದು ಹಾರೈಸಿದರು.
ಕೇರಳ ಸಮಾಜಮ್ ಉಡುಪಿ ಇದರ ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಶಾಸಕ ಯಶ್ವಾಲ್ ಎ. ಸುವರ್ಣ, ಕೇರಳ ಸಮಾಜಂ ಅಧ್ಯಕ್ಷ ಅರುಣ್ ಕುಮಾರ್, ಮಣಿಪಾಲ ಕೆಎಂಸಿ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್ ಹಾಗೂ ಯುನಿಟ್ ಹೆಡ್ ಡಾ.ಟಾಪ್ ದೇವಸ್ಯ, ಸುವರ್ಣ ಕರ್ನಾಟಕ ಕೇರಳ ಸಮಾಜಂನ ರಾಜ್ಯಾಧ್ಯಕ್ಷ ರಾಜನ್ ಜಾಕೋಬ್, ಶಿವಮೊಗ್ಗದ ಮಲೆಯಾಳಿ ಸಮಾಜಂ ಅಧ್ಯಕ್ಷ ಸತೀಶ್ ಎನ್.ಡಿ., ಮಂಗಳೂರಿನ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಅಧ್ಯಕ್ಷ ಮುರಳಿ ಹೊಸಮಜಲು, ಮಂಗಳೂರಿನ ವಿಶ್ವಕರ್ಮ ಮಲಯಾಳಿ ಸಮಾಜದ ಅಧ್ಯಕ್ಷ ಸಂದೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ಥೋಮಸ್ ಲೋಸಿಯೋಸ್, ಬಿನಿ ಜಾರ್ಜ್, ಪಿ.ಎ.ಮೋಹನ್ ದಾಸ್, ಕೃಷ್ಣನ್ ಎಂ., ಕೆ.ಕೆ.ಎಂ.ನಂಬಿಯಾರ್‌ರನ್ನು ಸಮ್ಮಾನಿಸಲಾಯಿತು.
ಸಮಾಜದ ಕಾರ್ಯನಿರ್ವಹಕ ಸದಸ್ಯ ನವೀನ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವಂದಿಸಿದರು. ಸದಸ್ಯೆ ಇಂದಿರಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.