ಡೈಲಿ ವಾರ್ತೆ : 01 ಆಗಸ್ಟ್ 2022

ಬೆಂಗಳೂರು: ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ಬ್ರಾಂಡೆಡ್ ವಾಚ್ ಗಳನ್ನು ದೋಚಿ ಪರಾರಿಯಾಗಿದ್ದ ಕೆಲಸಗಾರನನ್ನು ಸದಾಶಿವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಡಿಶಾ ಮೂಲದ ಜಯಂತ್ ದಾಸ್ ಬಂಧಿತ ಆರೋಪಿಗಳಾಗಿದ್ದು, ಆತನಿಂದ ಕಳವು ಮಾಡಿದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.


ಕಳೆದ ಐದು ವರ್ಷದಿಂದ ಎಂಬಿ ಪಾಟೀಲ್ ಮನೆಯಲ್ಲಿ ಬಟ್ಟೆ ಒಗೆದು ಇಸ್ತ್ರಿ ಮಾಡುವ ಲಾಂಡ್ರಿ ಕೆಲಸ ಮಾಡುತ್ತಿದ್ದ ಆರೋಪಿಯು ಮಾಜಿ ಗೃಹ ಸಚಿವರ ಕುಟುಂಬದವರ ನಂಬಿಕೆ ಗಳಿಸಿದ್ದ. ಎಂಬಿ ಪಾಟೀಲ್ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳೆದ ತಿಂಗಳು 85 ಲಕ್ಷ ರೂ ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ಲಕ್ಷಾಂತರ ಬೆಲೆಯ 6 ಬ್ರಾಂಡೆಡ್ ವಾಚ್ ಗಳನ್ನು ಕದ್ದು ಲಾಂಡ್ರಿ ಕೆಲಸ ಮಾಡುತ್ತಿದ್ದ ಆರೋಪಿ ಜಯಂತ್ ದಾಸ್ ಒಡಿಶಾಗೆ ಪರಾರಿಯಾಗಿದ್ದ.

ಮಾಹಿತಿ ತಿಳಿದ ಬಳಿಕ ಮಾಜಿ ಗೃಹ ಸಚಿವರು ತಮ್ಮ ಅಡುಗೆಯವರ ಮೂಲಕ ಸದಾಶಿವನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದರು. ದೂರಿನನ್ವಯ ಸದಾಶಿವನಗರ ಪೊಲೀಸರು ಆರೋಪಿ ಜಯಂತ್ ಬಂಧಿಸಿ ಕರೆ ತಂದು ಪ್ರಾಥಮಿಕ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಲಯವು ಆರೋಪಿಯನ್ನು ಐದು ದಿನ ಕಸ್ಟಡಿಗೆ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ.