ಉಡುಪಿ :ಹೆಬ್ರಿ ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನೋರ್ವ ತನ್ನ ತಮ್ಮನನ್ನೇ ಹೊಡೆದು ಬಾವಿಗೆ ಎಸೆದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಇನ್ನೋರ್ವ ಸಹೋದರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜ.13ರ ಬೆಳಗ್ಗೆ 8 ಗಂಟೆಯಿಂದ ಜ.14ರ ಬೆಳಗ್ಗೆ 9 ಗಂಟೆಯ ಮಧ್ಯಾವಧಿಯಲ್ಲಿ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆಯ ನಿವಾಸಿ ರವಿರಾಜ ಸೆಟ್ಟಿಗಾರ ಎಂಬವರ ಮೃತದೇಹ ಮನೆಯ ಹತ್ತಿರದ ಆವರಣವಿಲ್ಲದ ಬಾವಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಬಾವಿಯಿಂದ ಮೇಲೆತ್ತಿದಾಗ ತಲೆಯ ಹಿಂಬದಿಯಲ್ಲಿ ರಕ್ತಗಾಯ ಆಗಿರುವುದು ಕಂಡು ಬಂದಿದ್ದರಿಂದ ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ರವಿರಾಜರ ಇನ್ನೋರ್ವ ಸಹೋದರ ಪರ್ಕಳ 80 ಬಡಗುಬೆಟ್ಟು ಕೆಳಕಬ್ಯಾಡಿ ನಿವಾಸಿ ಜಯರಾಮ ಸೆಟ್ಟಿಗಾರ ಹೆಬ್ರಿ ಠಾಣೆಗೆ ದೂರು ನೀಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ರವಿರಾಜರ ತಲೆಯ ಹಿಂಭಾಗದಲ್ಲಿ ಯಾವುದೋ ಹರಿತವಾದ ಆಯಧದಿಂದ ಬಲವಾಗಿ ಕಡಿದು ಗಾಯಗಳಾಗಿರುವುದು ಕಂಡುಬಂದಿದೆ. ಅದೇ ರೀತಿ ತನಿಖೆ ವೇಳೆ ಹಾಜರಿದ್ದ ಪಂಚಾಯತುದಾರರು ಕೂಡ ಮೃತರನ್ನು ಯಾವುದೋ ಹರಿತವಾದ ಆಯಧದಿಂದ ಯಾರೋ ಬಲವಾಗಿ ಕಡಿದು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.