ಡೈಲಿ ವಾರ್ತೆ: 01 ಅಕ್ಟೋಬರ್ 2022

ಮಂಗಳೂರು: ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತ ಬಲೆಗೆ ಬಿದ್ದ ತಹಸೀಲ್ದಾರ್ ಪುರಂದರ ಹೆಗ್ಡೆ ಬಂಧನ.!

ದಕ್ಷಿಣ ಕನ್ನಡ: ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಗೆ ನಿನ್ನೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ತಹಸೀಲ್ದಾರ್ ಅವರ ಸಹಾಯಕ ಅಧಿಕಾರಿ ಶಿವಾನಂದ ನಾಟೇಕರ್ ನನ್ನು ಬಂಧಿಸಿದ್ದರು. ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್ ಆಗಿ ಅಧಿಕಾರಿ ಸಿಕ್ಕಿಬಿದ್ದಿದ್ದ.

ಜಾಗ ಮಾರಾಟಕ್ಕೆ ಸಲುವಾಗಿ ಎನ್‌ಓಸಿ ಕೇಳಿದ್ದ ಅರ್ಜಿದಾರನಲ್ಲಿ ಹತ್ತು ಸಾವಿರ ಲಂಚ ಕೇಳಿದ್ದ ಆರೋಪದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಯನ್ನು ಲೋಕಾಯುಕ್ತ ರೆಡ್ ಹ್ಯಾಂಡ್ ಆಗಿ ಬಂಧಿಸಿತ್ತು. ಆರೋಪಿ ವಿಚಾರಣೆ ವೇಳೆ ತಹಸೀಲ್ದಾರ್ ಪರವಾಗಿ ಹಣ ಕೇಳಿದ್ದಾಗಿ ತಿಳಿಸಿದ್ದು ಅದರಂತೆ ತಹಸೀಲ್ದಾರ್ ಪುರಂದರ ಹೆಗ್ಡೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಆರೋಪ ಕಂಡುಬಂದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯೇ ತಹಸೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಲೋಕಾಯುಕ್ತ ಬಂಧಿಸಿದ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗಟ್ಟಿದೆ.

ಲೋಕಾಯುಕ್ತ ಎಸ್ಪಿ ಲಕ್ಷ್ಮಿಗಣೇಶ್‌, ಡಿವೈಎಸ್ಪಿ ಚಲುವರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಇತ್ತೀಚೆಗೆ ಲೋಕಾಯುಕ್ತಕ್ಕೆ ಫುಲ್ ಪವರ್ ಸಿಕ್ಕ ಬಳಿಕ ಮೊದಲ ಬಾರಿಗೆ ಲೋಕಾಯುಕ್ತ ಮಂಗಳೂರಿನಲ್ಲಿ ರೈಡ್ ಮಾಡಿದ್ದು ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದೆ.