ಡೈಲಿ ವಾರ್ತೆ: 02 ಅಕ್ಟೋಬರ್ 2022

ದಶಮಾನೋತ್ಸವ ಸಂಭ್ರಮದಲ್ಲಿ ಕೋಟೇಶ್ವರದ ಸಾರ್ವಜನಿಕ ಶ್ರೀ ಶಾರದೋತ್ಸವ

ಕೋಟೇಶ್ವರದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಇದೀಗ ದಶಮಾನೋತ್ಸವದ ಸಂಭ್ರಮ. ಶುಭಕೃತ್ ನಾಮ ಸಂವತ್ಸರದ ಆಶ್ವೀಜ ಶುಕ್ಲ ಸಪ್ತಮಿ, ಅ. 2ರ ಭಾನುವಾರ ಬೆಳಿಗ್ಗೆ 9 ಕ್ಕೆ ವೈಭವದ ಮೆರವಣಿಗೆಯ ಮೂಲಕ ಶ್ರೀ ಶಾರದಾ ದೇವಿಯನ್ನು ಬರಮಾಡಿಕೊಳ್ಳಲಾಯಿತು.

ಶ್ರೀ ಕೋಟಿಲಿಂಗೇಶ್ವರ ದೇವಳ ರಥಬೀದಿಯಲ್ಲಿ ಸಾಗಿಬಂದ ಮೆರವಣಿಗೆಯಲ್ಲಿ ವಾದ್ಯಮೇಳದೊಂದಿಗೆ ತಟ್ಟಿರಾಯ ಜೋಡಿ ಕಳೆ ಗಟ್ಟುವಂತೆ ಮಾಡಿದರೆ,  ಸುಮಂಗಲಿಯರು ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಿದರು. ರಥಬೀದಿಯಲ್ಲಿನ ಭವ್ಯ ಉತ್ಸವ ಮಂಟಪದಲ್ಲಿ ಬೆಳಿಗ್ಗೆ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಶಾರದಾಂಬೆಯನ್ನು ಪ್ರತಿಷ್ಠಾಪಿಸಲಾಯಿತು. ವೇದಮೂರ್ತಿ ಕುಂಭಾಶಿ ನಾಗರಾಜ ಭಟ್ ಮತ್ತು ಸಹಪುರೋಹಿತರು ಪ್ರತಿಷ್ಠಾ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ಶ್ರೀ ದೇವಿ ಪೂಜಾ ವಿಧಿಗಳನ್ನು ಪ್ರಾರಂಭಿಸಲಾಯಿತು.

ಸಂಜೆ 7.30ಕ್ಕೆ ಧಾರ್ಮಿಕ ಸಭೆಯು ನಡೆಯಲಿದ್ದು, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಉದ್ಘಾಟಿಸುವರು. ಉತ್ಸವ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದು, ವಿಶ್ವ ಹಿಂದೂ ಪರಿಷದ್ ನ ಕೇಂದ್ರ ವಿಶ್ವಸ್ಥ ಮಂಡಳಿ ಸದಸ್ಯ ಕಟ್ಕೆರೆ ಪ್ರೇಮಾನಂದ ಶೆಟ್ಟಿ ಧಾರ್ಮಿಕ ಸಂದೇಶ ನೀಡುವರು. ನಂತರ ಪರಿಸರದ ಪ್ರತಿಭಾವಂತ ರಿಂದ ವಿವಿಧ ಕಾರ್ಯಕ್ರಮಗಳು ನಡೆಯುವುವು.