ಡೈಲಿ ವಾರ್ತೆ: 05 ಅಕ್ಟೋಬರ್ 2022

ಪಾಕಿಸ್ತಾನ ವೀಸಾ ನಿಷೇಧಿಸಿಲ್ಲ: ನನಗೆ ಬೇಕಾಗಿರುವ ವೀಸಾಕ್ಕಾಗಿ ಕಾಯುತ್ತಿದ್ದೇನೆ – ಶಿಹಾಬ್ ಚೋಟೂರು

ಅಮೃತಸರ : ಮಲಪ್ಪುರಂನಿಂದ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳಿದ್ದ ಶಿಹಾಬ್ ಚೋಟೂರ್ ಅವರಿಗೆ ಪಾಕಿಸ್ತಾನ ವೀಸಾ ನಿಷೇಧಿಸಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ಶಿಹಾಬ್ ಚೋಟ್ಟೂರ್ ಅವರು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊದಲ್ಲಿ ಚೋಟೂರ್ ಅವರು, ಪಾಕಿಸ್ತಾನವು ತನಗೆ ವೀಸಾವನ್ನು ನಿಷೇಧಿಸಿಲ್ಲ ಮತ್ತು ಈ ರೀತಿ ಹರಡುತ್ತಿರುವ ವದಂತಿಗಳು ಸುಳ್ಳು ಎಂದು ಹೇಳಿದರು.

ಪಾಕಿಸ್ತಾನ ನನಗೆ ಪ್ರವಾಸಿ ವೀಸಾ ನೀಡಲು ಮುಂದೆ ಬಂದಿದ್ದು, ಅವರು ಅದನ್ನು ಒಂದು ಗಂಟೆಯಲ್ಲಿ ನನಗೆ ನೀಡಲು ಸಿದ್ಧರಾಗಿದ್ದಾರೆ. ಆದರೆ ನನಗೆ ಬೇಕಾಗಿರುವುದು ಟ್ರಾನ್ಸಿಟ್ ವೀಸಾ, ಇದನ್ನು ಪಡೆಯಲು, ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮತ್ತೊಂದು ದಾಖಲೆಯನ್ನು ಹಾಜರುಪಡಿಸಬೇಕಾಗಿದೆ, ಅದನ್ನು ಸ್ವೀಕರಿಸಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಇಲ್ಲಿಗೆ ತಲುಪಲು ನಾನು 3200 ಕಿಲೋಮೀಟರ್ ನಡೆದಿದ್ದೇನೆ. 35 ರಷ್ಟು ಪ್ರಯಾಣವು ಈಗಾಗಲೇ ಪೂರ್ಣಗೊಂಡಿದೆ. ಇಲ್ಲಿಯವರೆಗೆ, ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಯಾವುದೇ ಆಯಾಸವನ್ನು ಅನುಭವಿಸಿಲ್ಲ. ನನ್ನ ಯಾತ್ರೆ ಪೂರ್ಣಗೊಳಿಸಲು ಸಾವನ್ನು ಹೊರತುಪಡಿಸಿ ಬೇರೇನೂ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಶಿಹಾಬ್ ಜೂನ್ 2 ರಂದು ತನ್ನ ಮನೆಯಿಂದ ಮೆಕ್ಕಾ ಕಡೆಗೆ ತನ್ನ ಕಾಲ್ನಡಿಗೆ ಯಾತ್ರೆಯನ್ನು ಪ್ರಾರಂಭಿಸಿದರು. ಅವರು ದಿನಕ್ಕೆ ಸರಾಸರಿ 30 ರಿಂದ 40 ಕಿ.ಮೀ ನಡೆಯುತ್ತಾರೆ. ಯಾತ್ರೆ ಈಗ 126 ದಿನಗಳನ್ನು ಪೂರೈಸಿದೆ ಮತ್ತು ಪಂಜಾಬ್ ನ ವಾಘಾ ಗಡಿಯ ಬಳಿ ತಲುಪಿದೆ. ಶಿಹಾಬ್ ಗೆ ದೇಶಾದ್ಯಂತ ವ್ಯಾಪಕ ಸ್ವಾಗತ ದೊರೆಯಿತು. ಶಿಹಾಬ್ ಭಾರತದಿಂದ ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಗೆ ಪ್ರಯಾಣಿಸಿ ಸೌದಿ ಅರೇಬಿಯಾವನ್ನು ಪ್ರವೇಶಿಸಲಿದ್ದಾರೆ. ಮಕ್ಕಾವನ್ನು ತಲುಪಲು ಅವರು ಸುಮಾರು 8,000 ಕಿಲೋಮೀಟರ್ ಗಿಂತ ಹೆಚ್ಚು ನಡೆಯಬೇಕಿದೆ.