ಹೊಸದಿಲ್ಲಿ: ಭಾರತಕ್ಕೆ ಆಗಮಿಸುವ ಮತ್ತು ಭಾರತದಿಂದ ನಿರ್ಗಮಿಸುವ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳನ್ನು ಫೆಬ್ರವರಿ 28 ರವರೆಗೆ ಸ್ಥಗಿತ ಗೊಳಿಸಲಾಗುವುದು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು(ಡಿಜಿಸಿಎ) ಬುಧವಾರ ಹೊಸ ಆದೇಶದಲ್ಲಿ ತಿಳಿಸಿದ್ದಾರೆ.

ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಮಾನಗಳ ಮೇಲೆ ಇದರಿಂದ ಪರಿಣಾಮ ಬೀರುವುದಿಲ್ಲ ಎಂದು ಡಿಜಿಸಿಎ ತಿಳಿಸಿದೆ.
ಜಗತ್ತು ಕೋವಿಡ್ -19 ಹೊಸ ರೂಪಾಂತರ ಒಮೈಕ್ರಾನ್ ನಿಂದ ಬಾಧಿತವಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಡಿಸೆಂಬರ್ 15 ರಿಂದ ನಿಗದಿತ ಅಂತರಾಷ್ಟ್ರೀಯ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲು ಕೇಂದ್ರವು ನವೆಂಬರ್ 2021 ರಲ್ಲಿ ನಿರ್ಧರಿಸಿತ್ತು. ಆದರೆ, ಒಮೈಕ್ರಾನ್ ಕಾಣಿಸಿಕೊಂಡ ಬಳಿಕ ಜನವರಿ 15 ರ ಮೊದಲು ನಿಗದಿತ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಸರಕಾರ ಹಿಂತೆಗೆದುಕೊಂಡಿತು.

ದೇಶದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರುವ ಎರಡು ದಿನಗಳ ಮೊದಲು ಮಾರ್ಚ್ 23, 2020 ರಿಂದ ಭಾರತದಲ್ಲಿ ನಿಗದಿತ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಏರ್ ಬಬಲ್ ಒಪ್ಪಂದಗಳ ಅಡಿಯಲ್ಲಿ ತುರ್ತು ಅಂತರಾಷ್ಟ್ರೀಯ ವಿಮಾನಕ್ಕೆ ಅವಕಾಶ ನೀಡಲಾಗಿತ್ತು.