ಡೈಲಿ ವಾರ್ತೆ: 23 ಅಕ್ಟೋಬರ್ 2022

ಕಾಣಿಯೂರಿನಲ್ಲಿ ಜವಳಿ ವ್ಯಾಪಾರಿಗಳ ಮೇಲೆ ಹಲ್ಲೆ: ಆರೋಪಿಗಳನ್ನು ಕೂಡಲೇ ಬಂಧಿಸಿ: ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರಿನಲ್ಲಿ ಜವಳಿ ವ್ಯಾಪಾರಿಗಳ ಮೇಲೆ ನಡೆದ ಕೊಲೆಯತ್ನ ಹಾಗೂ ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ದ.ಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ.

ಕಾಣಿಯೂರು ಪ್ರದೇಶದಲ್ಲಿ ಹೊಟ್ಟೆಪಾಡಿಗಾಗಿ ದೂರದ ಮಂಗಳೂರಿನ ಅಡ್ಡೂರಿನ ಯುವಕರು ಹಲವಾರು ವರ್ಷಗಳಿಂದ ಸದ್ರಿ ಪ್ರದೇಶದಲ್ಲಿ ಚಿರಪರಿಚಿತರಾಗಿರುವ ಜವಳಿ ಮಾರಾಟಮಾಡಲು ತೆರಳಿದ್ದ ಮಂಗಳೂರಿನ ಅಡ್ಡೂರಿನ ವ್ಯಾಪಾರಸ್ಥರಾದ ರಫೀಕ್ ಮತ್ತು ರಮೀಝ್ ಎಂಬವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆಯನ್ನು ನಡೆಸಿ, ಕೊಲೆಯತ್ನ ನಡೆಸಿರುವುದು ಖಂಡನೀಯವಾಗಿದೆ.

ಹಲ್ಲೆ ನಡೆಸಿದ ತಪ್ಪಿತಸ್ಥರನ್ನು ಕಠಿಣ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.

ಹೊಟ್ಟೆಪಾಡಿಗಾಗಿ ಬೆಡ್‌ಶೀಟ್ ಮಾರಾಟ ಮಾಡಲು ಹೋದ ಇಬ್ಬರು ಮುಸ್ಲಿಂ ಯುವಕರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಆದರೆ ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಸರಿಯಲ್ಲ.

ಇಂತಹ ಗುಂಪುಹಲ್ಲೆ ಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.