ಹೊಸದಿಲ್ಲಿ: ದೇಶದಲ್ಲಿ ರವಿವಾರ 3.33 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ಶನಿವಾರ ದಾಖಲಾದ 3.37 ಲಕ್ಷಕ್ಕೆ ಹೋಲಿಸಿದರೆ ಅಲ್ಪ ಕಡಿಮೆ. ಆದರೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ರವಿವಾರ ದೇಶಾದ್ಯಂತ 525 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದಾಗಿ ಈ ಮಾರಕ ವೈರಸ್ ಸೋಂಕಿನಿಂದ ಜೀವ ಕಳೆದುಕೊಂಡವರ ಸಂಖ್ಯೆ 4,89,409ಕ್ಕೇರಿದೆ.



ದೇಶದಲ್ಲಿ ಪ್ರಸ್ತುತ ಒಟ್ಟು 21,87,205 ಸಕ್ರಿಯ ಪ್ರಕರಣಗಳಿದ್ದು, ಇದು ಒಟ್ಟು ಸೋಂಕಿತರ ಶೇಕಡ 5.57ರಷ್ಟಾಗಿದೆ. ರಾಷ್ಟ್ರೀಯ ಕೋವಿಡ್-19 ಗುಣಮುಖರಾದವರ ಪ್ರಮಾಣ ಶೇಕಡ 93.18ಕ್ಕೆ ಇಳಿದಿದೆ.

ದೆಹಲಿಯಲ್ಲಿ ರವಿವಾರ 9197 ಹೊಸ ಪ್ರಕರಣಗಳು ದಾಖಲಾಗಿದ್ದು, 35 ಮಂದಿ ಕೋವಿಡ್ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಮುಂಬೈನಲ್ಲಿ 2550 ಹೊಸ ಪ್ರಕರಣಗಳು ಹಾಗೂ 13 ಸಾವು ವರದಿಯಾಗಿದೆ. ಇದಕ್ಕೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ 26,299 ಪ್ರಕರಣಗಳು ವರದಿಯಾಗಿವೆ.

ಏತನ್ಮಧ್ಯೆ ಕೋವಿಡ್-19 ಲಸಿಕಾ ಡೋಸ್ ನೀಡಿಕೆ ಸಂಖ್ಯೆ 162 ಕೋಟಿಯನ್ನು ದಾಟಿದೆ ಎಂದು ಲಸಿಕಾ ಪೋರ್ಟೆಲ್‌ನಿಂದ ತಿಳಿದು ಬರುತ್ತದೆ. 93 ಕೋಟಿ ಮಂದಿಗೆ ಮೊದಲ ಡೋಸ್ ಹಾಗೂ 68.4 ಕೋಟಿ ಮಂದಿಗೆ ಎರಡನೇ ಡೋಸ್ ನೀಡಲಾಗಿದ್ದು, 4.19 ಕೋಟಿ ಡೋಸ್‌ಗಳನ್ನು ಹದಿಹರೆಯದವರಿಗೆ ನೀಡಲಾಗಿದೆ.