



ಡೈಲಿವಾರ್ತೆ:23/ಏಪ್ರಿಲ್ /2026

ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟ; ಸಿಇಟಿ ಸಮರಕ್ಕೂ ಮುಹೂರ್ತ

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಇಂದು ಅತ್ಯಂತ ನಿರ್ಣಾಯಕ ದಿನ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದಿದ್ದ 2026ರ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶವು ಇಂದು (ಏಪ್ರಿಲ್ 23) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಹೊರಬೀಳಲಿದೆ.
ಇದರ ಬೆನ್ನಲ್ಲೇ ರಾಜ್ಯಾದ್ಯಂತ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಸಿಇಟಿ (CET) ಪರೀಕ್ಷೆಗಳಿಗೂ ಚಾಲನೆ ದೊರೆಯಲಿದೆ.
ಮಧ್ಯಾಹ್ನ 12ಕ್ಕೆ ಫಲಿತಾಂಶದ ಕ್ಷಣ:
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯ ಮೂಲಕ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಈ ಬಾರಿ ರಾಜ್ಯದ 2,870 ಕೇಂದ್ರಗಳಲ್ಲಿ ಒಟ್ಟು 8,65,988 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇಂದಿನ ಫಲಿತಾಂಶವು ಅವರ ಮುಂದಿನ ಶೈಕ್ಷಣಿಕ ಹಂತಕ್ಕೆ ದಿಕ್ಸೂಚಿಯಾಗಲಿದೆ.
ಸುದ್ದಿಗೋಷ್ಠಿಯ ನಂತರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಅಂಕಪಟ್ಟಿ ಲಭ್ಯವಾಗಲಿದೆ.
ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ:
ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಕುರಿತು ಈ ಹಿಂದೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆದಿದ್ದವು. ಈ ವಿಚಾರವಾಗಿ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಆದರೆ, ನ್ಯಾಯಾಲಯದ ಆದೇಶವನ್ನು ಗೌರವಿಸಿರುವ ಶಿಕ್ಷಣ ಇಲಾಖೆಯು ಈ ಬಾರಿಯೂ ಹಿಂದಿ ಭಾಷೆಗೆ ಅಂಕಗಳನ್ನೇ ನೀಡಲು ನಿರ್ಧರಿಸಿದೆ.
ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳಿಂದ ಸಿಇಟಿ ಬರವಣಿಗೆ ಒಂದೆಡೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸಂಭ್ರಮವಿದ್ದರೆ, ಮತ್ತೊಂದೆಡೆ ಇಂದಿನಿಂದ ರಾಜ್ಯಾದ್ಯಂತ ಸಿಇಟಿ ಪರೀಕ್ಷೆಗಳು ಆರಂಭವಾಗಲಿವೆ. ಈ ಬಾರಿ ದಾಖಲೆಯ 3.30 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.