ಡೈಲಿವಾರ್ತೆ: 25/ಮೇ/2026

ಕರಾವಳಿಯನ್ನೇ ಬೆಚ್ಚಿಬೀಳಿಸಿದ ಭೀಕರ ಪೋಕ್ಸೋ ಪ್ರಕರಣ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ – ತೆಕ್ಕಟ್ಟೆಯ ಇಬ್ಬರು ಕಾಮುಕರ ಬಂಧನ

​ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿ, ಲಾಡ್ಜ್‌ಗೆ ಕರೆದೊಯ್ದು ಸರಣಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ವಂಚಿಸಿರುವ ಅತ್ಯಂತ ಗಂಭೀರ ಹಾಗೂ ಪೈಶಾಚಿಕ ಪ್ರಕರಣವೊಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

​ಪ್ರಕರಣಕ್ಕೆ ಸಂಬಂಧಿಸಿದಂತೆ ತೆಕ್ಕಟ್ಟೆಯ ಜಿತೇಂದ್ರ ಶೆಟ್ಟಿ (ಆರೋಪಿ-1) ಹಾಗೂ ಸುಶಾನ್ ಪೂಜಾರಿ (ಆರೋಪಿ-2) ಎಂಬ ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ (POCSO) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಬಂದಿಸಲಾಗಿದೆ.

ಘಟನೆ ವಿವರ:
​ಸ್ನಾಪ್‌ಚಾಟ್‌ನಲ್ಲಿ ಶುರುವಾದ ಪರಿಚಯ, ಲಾಡ್ಜ್‌ನಲ್ಲಿ ಅತ್ಯಾಚಾರ:


​ಪೊಲೀಸ್ ಮೂಲಗಳ ಪ್ರಕಾರ, ಕೊಡವೂರು ಮಲ್ಪೆ ನಿವಾಸಿಯಾದ 17 ವರ್ಷದ ಅಪ್ರಾಪ್ತ ಬಾಲಕಿಗೆ ಕಳೆದ ಮಾರ್ಚ್ ತಿಂಗಳಲ್ಲಿ ‘ಸ್ನಾಪ್‌ಚಾಟ್’ (Snapchat) ಸಾಮಾಜಿಕ ಜಾಲತಾಣದ ಮೂಲಕ ಎರಡನೇ ಆರೋಪಿ ಸುಶಾನ್ ಪೂಜಾರಿ ಪರಿಚಯವಾಗಿದ್ದನು. ಈತನ ಮೂಲಕ ಮೊದಲನೇ ಆರೋಪಿ ಜಿತೇಂದ್ರನ ಪರಿಚಯವಾಗಿದೆ. ಬಾಲಕಿಯ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಜಿತೇಂದ್ರ, ದಿನಾಂಕ 25/03/2026 ರಂದು ಆಕೆಯನ್ನು ಪುಸಲಾಯಿಸಿ ಬ್ರಹ್ಮಾವರ ತಾಲೂಕಿನ ಬಾರ್ಕೂರು-ಮಂದಾರ್ತಿ ರಸ್ತೆಯಲ್ಲಿರುವ ‘ರಶ್ಮಿ ಲಾಡ್ಜ್‌’ಗೆ ಕರೆದೊಯ್ದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಜೀವಬೆದರಿಕೆ ಒಡ್ಡಿದ್ದಾನೆ.

​ತಂದೆಯ ಕಾಯಿಲೆಯ ನಾಟಕ: 71 ಗ್ರಾಂ ಚಿನ್ನಾಭರಣ ದೋಚಿದ ವಂಚಕರು:


​ದೈಹಿಕ ದೌರ್ಜನ್ಯದ ಬೆನ್ನಲ್ಲೇ ಆರೋಪಿಗಳು ಬಾಲಕಿಯನ್ನು ಆರ್ಥಿಕವಾಗಿಯೂ ಲೂಟಿ ಮಾಡಲು ಸಂಚು ರೂಪಿಸಿದ್ದರು. ಜಿತೇಂದ್ರನು ಬಾಲಕಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ನನ್ನ ತಂದೆಗೆ ಪಾರ್ಶ್ವವಾಯು (Paralysis) ಆಗಿದ್ದು, ತುರ್ತು ಹಣದ ಅಗತ್ಯವಿದೆ. ಮನೆಯಿಂದ ಚಿನ್ನಾಭರಣ ತಂದುಕೊಡು, ಒಂದು ವಾರದಲ್ಲಿ ಬಿಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ಬಾಲಕಿ ಏಪ್ರಿಲ್ ಮೊದಲ ವಾರದಲ್ಲಿ ಮನೆಯಲ್ಲಿದ್ದ ಕಿವಿಯೋಲೆ, ಚಿನ್ನದ ಉಂಗುರಗಳು, ಗಣಪತಿ ಪೆಂಡೆಂಟ್ ಒಳಗೊಂಡ ಚೈನ್ ಸೇರಿದಂತೆ ಭಾರಿ ಪ್ರಮಾಣದ ಒಡವೆಗಳನ್ನು ತಂದು ರೈಲ್ವೇ ಗೇಟ್ ಬಳಿ ಬೈಕ್‌ನಲ್ಲಿ ಬಂದಿದ್ದ ಜಿತೇಂದ್ರ ಮತ್ತು ಸುಶಾನ್‌ಗೆ ನೀಡಿದ್ದಾಳೆ.
​ಇದಾದ 15 ದಿನಗಳ ನಂತರ, ಕೊಟ್ಟ ಚಿನ್ನವನ್ನು ಬಿಡಿಸಬೇಕಾದರೆ ಇನ್ನುಳಿದ ಚಿನ್ನವನ್ನೂ ತರಬೇಕೆಂದು ಆರೋಪಿಗಳು ಬಾಲಕಿಯನ್ನು ಮತ್ತೆ ಹೆದರಿಸಿದ್ದಾರೆ. ಆರೋಪಿಗಳ ಮಾತಿಗೆ ಹೆದರಿದ ಬಾಲಕಿ ಪುನಃ ಮನೆಯಲ್ಲಿದ್ದ 2 ಚಿನ್ನದ ಚೈನ್, ಒಂದು ರಿಂಗ್ ಹಾಗೂ ಪೆಂಡೆಂಟ್ ಅನ್ನು ತಂದುಕೊಟ್ಟಿದ್ದಾಳೆ. ಆರೋಪಿಗಳು ಒಟ್ಟಾರೆ ಸುಮಾರು 71 ಗ್ರಾಂ ತೂಕದ ಚಿನ್ನಾಭರಣಗಳನ್ನು ಬಾಲಕಿಯಿಂದ ದೋಚಿದ್ದಾರೆ.


​ಸರಣಿ ದೌರ್ಜನ್ಯಕ್ಕೆ ಎರಡನೇ ಆರೋಪಿಯ ಸಾಥ್:
​ಹಣ ಹಾಗೂ ಒಡವೆಗಳನ್ನು ಪೀಕಿದ ಮೇಲೂ ಆರೋಪಿಗಳ ಕಾಮದಾಹ ಅಡಗಿರಲಿಲ್ಲ. ದಿನಾಂಕ 01-04-2026 ರಂದು ಕಾರಿನಲ್ಲಿ ಹಾಗೂ 15-04-2026 ರಂದು ಬೈಕ್‌ನಲ್ಲಿ ಬಂದ ಆರೋಪಿಗಳು ಆಕಾಶವಾಣಿ ಬಳಿಯಿಂದ ಬಾಲಕಿಯನ್ನು ಮತ್ತೆ ಅದೇ ರಶ್ಮಿ ಲಾಡ್ಜ್‌ಗೆ ಅಪಹರಿಸಿಕೊಂಡು ಹೋಗಿದ್ದಾರೆ. ಅಲ್ಲಿ ಒಂದನೇ ಆರೋಪಿ ಜಿತೇಂದ್ರ ಬಾಲಕಿಯ ಮೇಲೆ ಸರಣಿ ಅತ್ಯಾಚಾರ ಎಸಗಿದ್ದು, ಎರಡನೇ ಆರೋಪಿ ಸುಶಾನ್ ಈ ಕೃತ್ಯಕ್ಕೆ ಸಂಪೂರ್ಣವಾಗಿ ಸಹಕರಿಸಿ ಸಾಥ್ ನೀಡಿದ್ದಾನೆ.

​ತಡವಾಗಿ ಬೆಳಕಿಗೆ ಬಂದ ದಾರುಣ ಘಟನೆ:
​ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ಹಾಗೂ ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಮಗಳಲ್ಲಿ ವಿಚಾರಿಸಿದಾಗ ಈ ಇಡೀ ಭೀಕರ ದೌರ್ಜನ್ಯ ಮತ್ತು ವಂಚನೆಯ ಜಾಲ ಬೆಳಕಿಗೆ ಬಂದಿದೆ. ತಕ್ಷಣವೇ ಸಾರ್ವಜನಿಕರ ನೆರವಿನೊಂದಿಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 33/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 64(2)(ಎಮ್) (ಸರಣಿ ಅತ್ಯಾಚಾರ), 318(2) (ವಂಚನೆ), 351(2) r/w 3(5) (ಜೀವಬೆದರಿಕೆ ಮತ್ತು ಸಮಾನ ಉದ್ದೇಶ) ಹಾಗೂ ಅತ್ಯಂತ ಕಠಿಣವಾದ ಪೋಕ್ಸೋ ಕಾಯ್ದೆ (POCSO Act) ಸೆಕ್ಷನ್ 3(ಎ), 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

​ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಸಿ. ಅವರು ಸ್ವತಃ ತನಿಖಾಧಿಕಾರಿಯಾಗಿ ಕಾರ್ಯಪ್ರವೃತ್ತರಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ ಕಠಿಣ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿತರು ಕಾಲೇಜು ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಬೆಳೆಸಿ, ಬಳಿಕ ಭಾವನಾತ್ಮಕವಾಗಿ ವಂಚಿಸಿ ದೌರ್ಜನ್ಯ ಹಾಗೂ ಹಣ-ಚಿನ್ನಾಭರಣ ದೋಚುವ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈ ಸಂಬಂಧ ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ.