


ಡೈಲಿವಾರ್ತೆ: 05/ಜು./2026


ಬೃಹತ್ ತಡೆಗೋಡೆ ಕುಸಿದು ಎರಡು ಮನೆಗಳು ಜಖಂ, ಕುಟುಂಬಸ್ಥರು ಕೂದಲೆಳೆ ಅಂತರದಲ್ಲಿ ಪಾರು

ಹಾಸನ, ಜು. 5: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಬೃಹತ್ ತಡೆಗೋಡೆಯೊಂದು ಕುಸಿದು ಎರಡು ವಾಸದ ಮನೆಗಳು ಜಖಂಗೊಂಡಿರುವ ಘಟನೆ ಸಕಲೇಶಪುರ ಪಟ್ಟಣದ ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ.
ರೈಟ್ ಡೆವಲಪರ್ಸ್ ಸಂಸ್ಥೆಯವರು ನೂತನ ಬಡಾವಣೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಮಣ್ಣು ಕುಸಿತ ತಡೆಯುವ ಉದ್ದೇಶದಿಂದ ಸುಮಾರು 25 ಅಡಿ ಎತ್ತರ ಹಾಗೂ 150 ಮೀಟರ್ ಉದ್ದದ ತಡೆಗೋಡೆಯನ್ನು ನಿರ್ಮಿಸುತ್ತಿದ್ದರು. ಈ ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದ ವೇಳೆ ನಿರಂತರ ಮಳೆ ಮತ್ತು ಬಿರುಗಾಳಿಯ ಅಬ್ಬರಕ್ಕೆ ತಡೆಗೋಡೆ ಏಕಾಏಕಿ ಕುಸಿದಿದೆ.
ತಡೆಗೋಡೆ ಕುಸಿದ ಪರಿಣಾಮ ಮಧು ಹಾಗೂ ಅಬ್ದುಲ್ ಮುನಾಫ್ ಅವರಿಗೆ ಸೇರಿದ ಎರಡು ವಾಸದ ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಘಟನೆ ಸಂಭವಿಸಿದ ಸಂದರ್ಭದಲ್ಲಿ ಎರಡೂ ಕುಟುಂಬಗಳ ಸದಸ್ಯರು ಮನೆಯೊಳಗೆ ಮಲಗಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕುಟುಂಬಸ್ಥರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಮೌಲ್ಯಮಾಪನ ಕಾರ್ಯ ಕೈಗೊಳ್ಳಲಾಗಿದೆ.
ಈ ಕುರಿತು ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.