ಡೈಲಿವಾರ್ತೆ: 09/ಜು./2026

ಕೋಟೇಶ್ವರ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು

​ಕುಂದಾಪುರ: ಚಲಿಸುತ್ತಿದ್ದ ಬೈಕಿಗೆ ಹಿಂದಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೇಶ್ವರದ ಕಿನಾರಾ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

​ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಇಡೂರು ಕುಂಜಾಡಿ ಗ್ರಾಮದ ಜನ್ನಲ್‌ ಕೊಳ್ತಾ ನಿವಾಸಿ ಆನಂದ ಶೆಟ್ಟಿ ಅವರ ಪುತ್ರ ಭರತ್ ಶೆಟ್ಟಿ (33) ಎಂದು ಗುರುತಿಸಲಾಗಿದೆ.

ಘಟನೆ ವಿವರ:
​ಕೋಟೇಶ್ವರ ಸಮೀಪದ ಪೇಂಟಿಂಗ್ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಭರತ್ ಶೆಟ್ಟಿ ಅವರು, ಕೆಲಸದ ನಿಮಿತ್ತ ಕೋಟೇಶ್ವರದಿಂದ ಕುಂದಾಪುರ ಕಡೆಗೆ ತಮ್ಮ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಾಲ ಮುರುಗನ್ ಎಂಬಾತ ಚಲಾಯಿಸುತ್ತಿದ್ದ ಲಾರಿಯು, ರಸ್ತೆಯ ಬಲಬದಿಯಲ್ಲಿ ಹೋಗುತ್ತಿದ್ದ ವಾಹನವೊಂದನ್ನು ಎಡಬದಿಯಿಂದ ಓವರ್‌ಟೇಕ್ ಮಾಡಲು ಯತ್ನಿಸಿದೆ. ಈ ಪ್ರಕ್ರಿಯೆಯಲ್ಲಿ ಲಾರಿಯು ಮುಂಭಾಗದಲ್ಲಿ ಸಂಚರಿಸುತ್ತಿದ್ದ ಭರತ್ ಶೆಟ್ಟಿ ಅವರ ಬೈಕಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಭರತ್ ಶೆಟ್ಟಿ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತದ ಜಾಗದಲ್ಲಿ ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಎನ್. ಆರ್. ಆಚಾರ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

​ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಯುವಕ
​ಮೃತ ಭರತ್ ಶೆಟ್ಟಿ ಅವರಿಗೆ ಕೇವಲ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು. ಸದ್ಯ ತಾರುಣ್ಯದಲ್ಲೇ ಪತಿಯನ್ನು ಕಳೆದುಕೊಂಡ ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ