


ಡೈಲಿವಾರ್ತೆ:21/ಆಗಸ್ಟ್ /2026

ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿದ ಆರೋಪ – ಆರೋಪಿ ಪೊಲೀಸ್ ವಶಕ್ಕೆ

ಬಂಟ್ವಾಳ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಿಂಬಾಲಿಸಿ, ಆಕೆಯನ್ನು ಗಮನಿಸುತ್ತಿದ್ದ ಆರೋಪದ ಮೇರೆಗೆ ಬಂಟ್ವಾಳ ನಗರ ಠಾಣೆ ಪೊಲೀಸರು ಬಂಟ್ವಾಳ ತಾಲೂಕಿನ ಸರಪಾಡಿ ನಿವಾಸಿ ಜಯಂತ್ (47) ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ 16 ವರ್ಷದ ಬಾಲಕಿಯೊಬ್ಬಳು ಕೆಲ ದಿನಗಳಿಂದ ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಧ್ಯವಯಸ್ಕ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದುದಾಗಿ ತಿಳಿಸಿದ್ದಾಳೆ.
ಆ.19 ರಂದು ಸಂಜೆ ಬಾಲಕಿ ಕಲ್ಲಡ್ಕ ಬಸ್ ನಿಲ್ದಾಣಕ್ಕೆ ಬಂದಾಗ ಅದೇ ವ್ಯಕ್ತಿ ಅಲ್ಲಿಯೂ ಆಕೆಯನ್ನು ಗಮನಿಸುತ್ತಿರುವುದು ಕಂಡುಬಂದಿದೆ. ಇದರಿಂದ ಭಯಗೊಂಡ ಬಾಲಕಿ ತನ್ನ ತಾಯಿಯ ಕೆಲಸದ ಸ್ಥಳಕ್ಕೆ ತೆರಳಿ ವಿಷಯ ತಿಳಿಸಿದ್ದಾಳೆ. ಬಳಿಕ ಬಾಲಕಿಯ ತಾಯಿ ಕಚೇರಿ ಮಾಲೀಕರೊಂದಿಗೆ ಬಸ್ ನಿಲ್ದಾಣದ ಬಳಿ ತೆರಳಿ ಆತನನ್ನು ವಿಚಾರಿಸಿದಾಗ ಆತ ತನ್ನ ಹೆಸರು ಜಯಂತ್ ಎಂದು ತಿಳಿಸಿ ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 78 ಹಾಗೂ ಪೋಕ್ಸೊ ಕಾಯ್ದೆ 2012ರ ಕಲಂ 12ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು,
ತನಿಖೆ ಕೈಗೊಂಡ ಪೊಲೀಸರು ಸರಪಾಡಿ ನಿವಾಸಿ ಜಯಂತ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.