ಡೈಲಿವಾರ್ತೆ:24/ಆಗಸ್ಟ್ /2026

ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸ್ಫೋಟ: ಮೂರು ನವಜಾತ ಶಿಶುಗಳು ದಾರುಣ ಸಾವು

ಮುಂಬೈ: ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಮಹಿಳಾ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU) ವೆಂಟಿಲೇಟರ್‌ ಸ್ಫೋಟಗೊಂಡು ಮೂರು ನವಜಾತ ಶಿಶುಗಳು ಸಾವನ್ನಪ್ಪಿದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.
ಘಟನೆಯಿಂದ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಲವು ಶಿಶುಗಳನ್ನು ತುರ್ತಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಬೆಳಗಿನ ಜಾವ 3:30ರ ಸುಮಾರಿಗೆ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ವೆಂಟಿಲೇಟರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಸಮಯದಲ್ಲಿ 39 ನವಜಾತ ಶಿಶುಗಳು ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ ಇದ್ದವು. ತೀವ್ರ ಸುಟ್ಟಗಾಯಗಳು ಮತ್ತು ಹೊಗೆಯಿಂದ ಉಸಿರುಗಟ್ಟಿ ಮೂರು ಶಿಶುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಬೆಂಕಿ ಹೊತ್ತಿಕೊಂಡ ನಂತರ ವೈದ್ಯರು, ನರ್ಸ್‌ಗಳು ಮತ್ತು ಇತರ ಆಸ್ಪತ್ರೆ ಸಿಬ್ಬಂದಿ ವಾರ್ಡ್‌ಗೆ ಧಾವಿಸಿ ಶಿಶುಗಳನ್ನು ಸ್ಥಳಾಂತರಿಸಿದರು. ಅವಘಡದಿಂದ ಸಮಸ್ಯೆಗೊಳಗಾದ ಆರು ನವಜಾತ ಶಿಶುಗಳನ್ನು ಹತ್ತಿರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.