ಡೈಲಿವಾರ್ತೆ:28/ಆಗಸ್ಟ್ /2026

ಮಧ್ಯಪ್ರದೇಶ: ಭೀಕರ ಬಸ್ ಅಪಘಾತ – ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ಸಾವು

ರಾಜ್‌ಗಢ: ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದು ಆರೋಪಿಯ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಮಧ್ಯಪ್ರದೇಶದ ರಾಜ್‌ಗಢದ ಬಿಯೋರಾದ ಭೋಪಾಲ್ ಬೈಪಾಸ್ ಸೇತುವೆ ಬಳಿ ಸಂಭವಿಸಿದೆ.

ಬೆಂಗಳೂರಿನ ಆಗ್ನೇಯ ಸೈಬರ್ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್ ರವಿ ಕೆ.ಬಿ. ಮೃತ ದುರ್ದೈವಿ. ಅಲ್ಲದೇ ಅವರ ಜೊತೆಗಿದ್ದ ಪೊಲೀಸ್ ಸಿಬ್ಬಂದಿಯಾದ ವಿಶ್ವನಾಥ್ ಮತ್ತು ರಮೇಶ್ ಗಾಯಗೊಂಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಕಾನ್ಪುರದಿಂದ ಇಂದೋರ್‌ಗೆ ಪ್ರಯಾಣಿಸುತ್ತಿದ್ದ ಬಸ್ ಬಿಯೋರಾ ಬಳಿಯ ಸೇತುವೆಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲಿನ ಡೆಕ್ನ ಸೀಟ್ಗಳಲ್ಲಿ ಮಲಗಿದ್ದ ಪ್ರಯಾಣಿಕರು ಕಿಟಕಿಗಳಿಂದ ಹೊರಗೆ ಎಸೆಯಲ್ಪಟ್ಟು ಸೇತುವೆಯ ಕೆಳಗೆ ಬಿದ್ದು ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ 11 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಮಧ್ಯಪ್ರದೇಶದ ಬಿಯೋರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ರಾಜ್‌ಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಟೋಲಾನಿ ಪ್ರಾಥಮಿಕ ತನಿಖೆ ಪ್ರಕಾರ ಅತಿವೇಗವೇ ಘಟನೆಗೆ ಕಾರಣವಾಗಿದೆ.
ಬಸ್ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದ ಸ್ಥಳದಲ್ಲಿ ತಿರುವು ಇದೆ.
ಘಟನೆಯಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಸಬ್ – ಇನ್ಸ್‌ಪೆಕ್ಟರ್ ರವಿ ಕೆ.ಬಿ. ಅವರೂ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ಇಲ್ಲಿಗೆ ಬಂದಿದ್ದರು. ರವಿ ಅವರ ತಂಡದ ಸಿಬ್ಬಂದಿಯಾದ ವಿಶ್ವನಾಥ್ ಮತ್ತು ರಮೇಶ್ ಎಂಬವರೂ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.