


ಡೈಲಿವಾರ್ತೆ:31/ಆಗಸ್ಟ್ /2026

ಬಂಟ್ವಾಳ: ಬೈಕ್ಗೆ ಆಟೋ ರಿಕ್ಷಾ ಡಿಕ್ಕಿ – ಸವಾರ ಸಾವು

ಬಂಟ್ವಾಳ: ಅಟೋ ರಿಕ್ಷಾ ಡಿಕ್ಕಿ ಹೊಡೆದು ಬೈಕ್ ಸವಾರ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಾರ್ನಬೈಲು ಸಮೀಪದ ಸಜಿಪ ಮೂಡ ಗ್ರಾಮದ ಕಂದೂರು-ಪೆಲತ್ತಕಟ್ಟೆ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.
ಮೃತ ಯುವಕನನ್ನು ನಂದಾವರ-ಸುನ್ನೀ ನಗರ ನಿವಾಸಿ ಮುಹಮ್ಮದ್ ರಾಶಿಕ್ (25) ಎಂದು ಗುರುತಿಸಲಾಗಿದೆ.
ಅವಿವಾಹಿತನಾಗಿರುವ ರಾಶಿಕ್ ನಂದಾವರ ಶಾಲಾ ಸಮೀಪ ಗ್ಯಾರೇಜ್ ನಡೆಸುತ್ತಿದ್ದ. ಈತ ಭಾನುವಾರ ರಾತ್ರಿ ಸಜಿಪಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ರಾತ್ರಿ ಸುಮಾರು 8 ಗಂಟೆಗೆ ಪೆಲತ್ತಕಟ್ಟೆಯಲ್ಲಿ ಶಿವಾಜಿ ಕುಮಾರ್ ಎಂಬವರು ಚಲಾಯಿಸುತ್ತಿದ್ದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ತಕ್ಷಣ ಸ್ಥಳೀಯರು ಆತನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ತಲೆಗೆ ಗಂಭೀರ ಗಾಯಗೊಂಡಿದ್ದ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಾವರ ನಿವಾಸಿ ಜೈನುಲ್ ಆಬಿದೀನ್ ಎಂಬವರು ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯವಾಗಿ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಯುವಕನಾಗಿದ್ದ ರಶೀಕ್ ಅವರ ಅಕಾಲಿಕ ನಿಧನ ಇಡೀ ನಂದಾವರ ಊರನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ ಎಂದು ಸ್ಥಳೀಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮೃತ ರಶೀಕ್ ತಂದೆ, ತಾಯಿ, ಸಹೋದರ-ಸಹೋದರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.