ಡೈಲಿ ವಾರ್ತೆ : 05 ಮೇ 2022

ರಾಯ್ ಪುರ: ಜೆಸಿಬಿಯ ಟೈರ್ ಗೆ ಗಾಳಿ ತುಂಬಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ರಾಯ್‌ಪುರದ ಸಿಲ್ತಾರಾ ಕೈಗಾರಿಕಾ ಪ್ರದೇಶದಲ್ಲಿ ಮೇ 3 ರಂದು ಸಂಭವಿಸಿದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆಲಸಗಾರನೊಬ್ಬ ಟೈರ್ ಗೆ ಗಾಳಿ ತುಂಬಿಸುತ್ತಿದ್ದ ವೇಳೆ ಇನ್ನೋರ್ವ ಕೆಲಸಗಾರ ಬಂದು ಗಾಳಿ ಪ್ರಮಾಣವನ್ನು ಪರೀಕ್ಷಿಸಲು ಟೈರ್ ಅನ್ನು ಒತ್ತುವ ವೇಳೆ ಅದು ಸ್ಫೋಟಗೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಫೋಟದ ತೀವ್ರತೆಗೆ ಇಬ್ಬರು ಕೆಲಸಗಾರರು ಹಾರಿ ಬೀಳುವ ದೃಶ್ಯ ಸೆರೆಯಾಗಿದೆ.

ಸ್ಫೋಟದಲ್ಲಿ ಮೃತಪಟ್ಟ ಇಬ್ಬರು ಕಾರ್ಮಿಕರು ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ಘಟನೆ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.