ಡೈಲಿ ವಾರ್ತೆ: 17/ಮೇ /2024
ಕುಂದಾಪುರ: ಮುಸ್ಲಿಂ ಜನಸಂಖ್ಯೆ ತೋರಿಸಲು ಪಾಕಿಸ್ತಾನದ ಧ್ವಜ ಬಳಕೆ – ಸುವರ್ಣ ನ್ಯೂಸ್ ಮತ್ತು ಅಜಿತ್ ಹನುಮಕ್ಕನವರ್ ವಿರುದ್ಧ ದೂರು ದಾಖಲು
ಕುಂದಾಪುರ: ಭಾರತದ ಮುಸ್ಲಿಂ ಜನಸಂಖ್ಯೆಯನ್ನು ಸುಳ್ಳು ಸುದ್ದಿ ಪ್ರಚಾರ ಮಾಡಿ, ಮತ್ತು ಪಾಕಿಸ್ಥಾನದ ದ್ವಜವನ್ನು ಮುಸ್ಲಿಮರಿಗೆ ಹೊಲಿಸಿ, ಕೋಮುದ್ವೇಷ ಹರಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಅಜಿತ್ ಹನುಮಕ್ಕನವರ್ ವಿರುದ್ದ ಮೇ. 17 ರಂದು ಉಡುಪಿ ಜಿಲ್ಲೆಯ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಮುನಾಫ್ ಕೋಡಿ ಇವರ ನೇತೃತ್ವದಲ್ಲಿ ಕುಂದಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
2024 ರ ಲೋಕಸಭಾ ಚುನಾವಣೆಯ ಮಧ್ಯೆ ಬಿಡುಗಡೆಯಾದ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು (EAC-PM) ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿಯ ಬಗ್ಗೆ ಸುವರ್ಣ ನ್ಯೂಸ್‌ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದೂಗಳ ಜನಸಂಖ್ಯೆ ತಿಳಿಸಲು ಭಾರತದ ತ್ರಿವರ್ಣ ಧ್ವಜ, ಮುಸ್ಲಿಮರ ಜನಸಂಖ್ಯೆಯನ್ನು ತಿಳಿಸಲು ಪಾಕಿಸ್ತಾನದ ಧ್ವಜ ಬಳಸಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆಳವಣಿಗೆಗೆ ಸಂಬಂಧಿಸಿದಂತೆ ಕನ್ನಡ ಸುದ್ದಿವಾಹಿನಿ ಏಷ್ಯಾ ನೆಟ್ ಸುವರ್ಣ ನ್ಯೂಸ್ ಹಾಗೂ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಅಬು ಮೊಹಮ್ಮದ್, ಮುಸ್ಲಿಂ ಒಕ್ಕೂಟ ಇದರ ಉಪಾಧ್ಯಕ್ಷರುಗಳಾದ ರಫೀಕ್ ಗಂಗೊಳ್ಳಿ, ಹನೀಫ್ ಗುಲ್ವಾಡಿ, ಕಾಂಗ್ರೆಸ್ ಮುಖಂಡರಾದ ಸೈಯ್ಯದ್ ಯಾಸೀನ್ ಹೆಮ್ಮಾಡಿ, ಪತ್ರಕರ್ತರಾದ ಮುನಾಫ್ ಇವರೆಲ್ಲರು ಉಪಸ್ಥಿತರಿದ್ದರು.