ಡೈಲಿವಾರ್ತೆ:15/ಅ./2026

ಪೇಶಾವರದಲ್ಲಿ ಭೀಕರ ದುರಂತ:
ಶಾಲಾ ಮೇಲ್ಛಾವಣಿ ಕುಸಿತಕ್ಕೆ 21ಮಕ್ಕಳು ಸೇರಿ 22 ಮಂದಿ ಬಲಿ!

ಪಾಕಿಸ್ತಾನ: ಶಾಲೆಯ ಮೇಲ್ಛಾವಣಿ ಏಕಾಏಕಿ ಕುಸಿದು 21 ಮಕ್ಕಳು ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಪಾಕಿಸ್ತಾನದ ಪೇಶಾವರದ ಆಫ್ರಿದಿ ಅಬಾದ್ ಪ್ರದೇಶದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಆಫ್ರಿದಿ ಅಬಾದ್ ಪ್ರದೇಶದಲ್ಲಿರುವ ಅಲ್ ಖೈರ್ ಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ವಿದ್ಯಾರ್ಥಿಗಳು ತರಗತಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಶಾಲೆಯ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಇದರಿಂದಾಗಿ ಕಟ್ಟಡದ ಅವಶೇಷಗಳಡಿ ಮಕ್ಕಳು ಸಿಲುಕಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ದುರ್ಘಟನೆಯಲ್ಲಿ ಓರ್ವ ಶಿಕ್ಷಕಿ ಹಾಗೂ 21 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಮಕ್ಕಳಲ್ಲಿ 7ರಿಂದ 12 ವರ್ಷದೊಳಗಿನ 18 ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.

ಘಟನೆಯಲ್ಲಿ 21 ಮಕ್ಕಳು ಗಾಯಗೊಂಡಿದ್ದು, ಅವರಲ್ಲಿ ಐವರು ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದುರಂತದ ಮಾಹಿತಿ ಲಭಿಸುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ. ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ, ಅದರಡಿ ಇನ್ನೂ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.