ಡೈಲಿವಾರ್ತೆ:15/ಅ./2026

ಸಜೀಪಮೂಡ : ಅ.17 ರಿಂದ 22 ರ ತನಕ 100ನೇ ವರ್ಷದ ಶಾರದಾ ಪೂಜಾ ಮಹೋತ್ಸವ

ಬಂಟ್ವಾಳ : ಸಜೀಪಮೂಡದ ಸುಭಾಷ್ ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸುಭಾಷ್ ಯುವಕ ಮಂಡಲ (ರಿ) ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ವತಿಯಿಂದ ಆಚರಿಸಲ್ಪಡುವ ಶ್ರೀ ಶಾರದಾ ಪೂಜಾ ಮಹೋತ್ಸವ ಹಾಗೂ ಶತಮಾನೋತ್ಸವ ಕಾರ್ಯಕ್ರಮ ಅಕ್ಟೋಬರ್ 17 ರಿಂದ 22 ರ ತನಕ ನಡೆಯಲಿದೆ ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಎನ್. ವಿವೇಕ್ ಶೆಟ್ಟಿ ಹೇಳಿದರು.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 100ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆರು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ಬಡವರಿಗೆ ಮನೆ, ವೈದ್ಯಕೀಯ ನೆರವು ನೀಡುವ ಕಾರ್ಯ ಮಾಡಲಾಗಿದೆ. ಸುಭಾಷ್ ನಗರ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸಲಾಗಿದೆ ಎಂದರು.

ಅಕ್ಟೋಬರ್ 17 ರಂದು ಬೆಳಗ್ಗೆ ಶ್ರೀ ಶಾರದಾ ದೇವಿ ಪ್ರತಿಷ್ಠೆ, ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಶಾಲೆಗೆ ದಾನಿಗಳ ನೆರವಿನಿಂದ ನಿರ್ಮಿಸಲಾದ ಸುಸಜ್ಜಿತ ಕೊಠಡಿಯ ಉದ್ಘಾಟನೆ ನೆರವೇರಲಿದೆ. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ ಸಹಿತ ಗಣ್ಯರು ಆಗಮಿಸುವರು.

ಅಕ್ಟೋಬರ್ 18ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಭಾಗವಹಿಸುವರು. ಅಕ್ಟೋಬರ್ 21ರಂದು ಸಂಜೆ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ವೈಭವ ನಡೆಯಲಿದ್ದು, ಅ.17 ರಂದು ಸಂಜೆ ಸ್ಥಳೀಯ ತಂಡಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, 18 ರಂದು ಚಲನಚಿತ್ರ ಹಿನ್ನೆಲೆ ಗಾಯಕರ ಸಂಗೀತ ವೈಭವ, 19 ರಂದು ಚಾಪರ್ಕ ಕಲಾವಿದರಿಂದ ಯಾನೊರಿ ಬರೊಲಿಯಾ ನಾಟಕ, 20 ರಂದು ಅಟ್ಲಾಸ್ ಸಾಂಸ್ಕೃತಿಕ ವೈಭವ, 21ರಂದು ಶನಿ ಮಹಾತ್ಮೆ ಪೌರಾಣಿಕ ನಾಟಕ ನಡೆಯಲಿದೆ.

ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಿಂದ ಹೊರಡಲಿದೆ.

ಅಕ್ಟೋಬರ್ 22ರಂದು ಗುರುವಾರ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ನಾಸಿಕ್ ಬ್ಯಾಂಡ್, ತಂಬೋಲಂ, ಸ್ತಬ್ಧ ಚಿತ್ರಗಳು, ಚೆಂಡೆ, ವಯೋಲಿನ್, ಕುಣಿತ ಭಜನೆ, ಗೊಂಬೆ ಕುಣಿತ ಮತ್ತು ಹಲವು ಸಾಂಸ್ಕೃತಿಕ ತಂಡಗಳೊಂದಿಗೆ ಮೆರವಣಿಗೆ ಉತ್ಸವ ವೇದಿಕೆಯಿಂದ ಹೊರಟು ಮಾರ್ನಬೈಲ್ ಗೆ ತೆರಳಿ ಅಲ್ಲಿಂದ ಹಿಂದಿರುಗಿ ಸುಭಾಷ್ ನಗರವಾಗಿ ವಿದ್ಯಾನಗರ, ಶ್ರೀ ಶಾರದಾ ಭಜನಾ ಮಂದಿರ ಬಳಿಕ ಆಲಾಡಿ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿ ಪ್ರತಿಷ್ಠಾ ವಿಸರ್ಜನೆ ನಡೆಯಲಿದೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಬಿ. ಶೋಭಿತ್ ಪೂಂಜ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್. ಶ್ರೀಕಾಂತ ಶೆಟ್ಟಿ, ಕೋಶಾಧಿಕಾರಿ ಕೀರ್ತನ್ ಆಳ್ವ ಕಾಂತಾಡಿಗುತ್ತು, ಜೊತೆ ಕಾರ್ಯದರ್ಶಿ ಸುಜೀತ್ ಕುಮಾರ್ ಬೆಂಕ್ಯ ಉಪಸ್ಥಿತರಿದ್ದರು.