




ಡೈಲಿವಾರ್ತೆ:15/ಅ./2026

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್:
ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರದ ಚಿಂತನೆ

ಉಡುಪಿ, ಅ. 15: ಕರಾವಳಿ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ ಮುಖ್ಯಮಂತ್ರಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತುಳು ಭಾಷೆಯಲ್ಲಿ ಶುಭಾಶಯ ಕೋರುವ ಮೂಲಕ ಭಾಷಣ ಆರಂಭಿಸಿದ ಅವರು, ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆದಿದ್ದೆ. ಈಗ ಮುಖ್ಯಮಂತ್ರಿಯಾಗಿ ಪ್ರಜಾಸೇವಕನಾಗಿ ದೇವಿಯ ದರ್ಶನ ಪಡೆದಿರುವುದು ನನ್ನ ಭಾಗ್ಯ ಎಂದು ಹೇಳಿದರು.

ಮಹಿಳಾ ಸಬಲೀಕರಣಕ್ಕೆ ಆದ್ಯತೆ:
ಮಹಿಳಾ ಸಬಲೀಕರಣವೇ ಸಮಾಜದ ಪ್ರಗತಿಗೆ ಪ್ರಮುಖ ಆಧಾರ. ಮಹಾಲಕ್ಷ್ಮೀ ಸಂಪತ್ತಿನ ಸಂಕೇತವಾದರೆ, ಸರಸ್ವತಿ ಜ್ಞಾನದ ಸಂಕೇತ ಹಾಗೂ ಮಹಾಕಾಳಿ ಶಕ್ತಿಯ ಪ್ರತೀಕ. ಮಹಿಳೆಯರ ಸಬಲೀಕರಣದ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಕರಾವಳಿ ಭಾಗದ ಮೀನುಗಾರ ಮಹಿಳೆಯರು ಬಡ್ಡಿರಹಿತ ಸಾಲ ಸೌಲಭ್ಯ, ಬಂದರು ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಹೊಸ ಘೋಷಣೆ ಮಾಡಲು ಸಾಧ್ಯವಿಲ್ಲ. ಬೆಂಗಳೂರಿಗೆ ತೆರಳಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಕಳದಲ್ಲಿ ಕೆತ್ತನೆ ಕಲೆಗೆ ಉತ್ತೇಜನ:
ಕರಾವಳಿಯ ಸಾಂಪ್ರದಾಯಿಕ ಚಿನ್ನದ ಕೆಲಸ ಹಾಗೂ ಮರದ ಕೆತ್ತನೆ ಕಲೆಯನ್ನು ಸಂರಕ್ಷಿಸುವುದರೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕಾರ್ಕಳದಲ್ಲಿ ಪಾರ್ಕ್ ನಿರ್ಮಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದೇವಸ್ಥಾನಗಳ ಪ್ರವಾಸೋದ್ಯಮ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆ. ಕರಾವಳಿ ಭಾಗದ ಯುವಕರು ಉದ್ಯೋಗಕ್ಕಾಗಿ ಬೇರೆ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು, ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು.

ದಸರಾ ಕೇವಲ ಧಾರ್ಮಿಕ ಹಬ್ಬವಲ್ಲ; ಅದು ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ಮಹತ್ವದ ಸಂದರ್ಭವೂ ಹೌದು. ಹಬ್ಬಗಳ ಮೂಲಕ ಸ್ಥಳೀಯ ವ್ಯಾಪಾರ, ಉದ್ಯೋಗ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತದೆ. ಜಾತಿ-ಧರ್ಮಗಳ ಭೇದಭಾವ ಮರೆತು ಮಾನವೀಯತೆಗೆ ಆದ್ಯತೆ ನೀಡಬೇಕು. ರಾಜ್ಯದ ಅಭಿವೃದ್ಧಿಗೆ ಜನರ ಆಶೀರ್ವಾದ ಮತ್ತು ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉಚ್ಚಿಲದಲ್ಲಿ ಚಂಡೆ, ಡೋಲು, ಹುಲಿವೇಷ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಬಳಿಕ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿ, ಮೊಗವೀರ ಕುಲಗುರು ಮಾಧವ ಮಂಗಲ ಗುರುಗಳ ಕಂಚಿನ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.