




ಡೈಲಿವಾರ್ತೆ:16/ಅ./2026

ಮಂಗಳೂರಿನಲ್ಲಿ ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ: ಚರ್ಚ್ ಪಾದ್ರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಮಂಗಳೂರು, ಅ.16: ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಸೈಂಟ್ ವಿನ್ಸೆಂಟ್ ಫೆರಾರ್ ಚರ್ಚ್ನ ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಒಡನಾಡಿ ಸಂಸ್ಥೆಯು ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸಂತ್ರಸ್ತ ಬಾಲಕರನ್ನು ಸಂಪರ್ಕಿಸಿ, ಘಟನೆ ಕುರಿತು ಅಧಿಕೃತ ದೂರು ದಾಖಲಿಸುವಂತೆ ಕ್ರಮ ಕೈಗೊಂಡಿದ್ದಾರೆ. ಇದರಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಗಳ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಳ್ಳುವ ನಿರೀಕ್ಷೆಯಿದೆ.
ಚಾಕಲೇಟ್ ನೀಡಿ ಪುಸಲಾಯಿಸಿ ಕಿರುಕುಳ ನೀಡಿದ ಆರೋಪ:
ಪೊಲೀಸರಿಗೆ ಸಲ್ಲಿಸಿರುವ ದೂರಿನ ಪ್ರಕಾರ, ಚರ್ಚ್ಗೆ ಸಂಜೆ ಪ್ರಾರ್ಥನೆಗಾಗಿ ಬರುತ್ತಿದ್ದ ಬಾಲಕನಿಗೆ ಪಾದ್ರಿ ಚಾಕಲೇಟ್ ನೀಡಿ, ಆಕರ್ಷಕ ಮಾತುಗಳ ಮೂಲಕ ಪುಸಲಾಯಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಬಾಲಕನನ್ನು ಚರ್ಚ್ನ ಕೊಠಡಿಯೊಂದಕ್ಕೆ ಕರೆದೊಯ್ದು ಲೈಂಗಿಕ ಉದ್ದೇಶದಿಂದ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರಂಭದಲ್ಲಿ ಬಾಲಕನ ದೇಹದ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡುತ್ತಿದ್ದರೆ, ನಂತರದ ದಿನಗಳಲ್ಲಿಯೂ ಪ್ರಾರ್ಥನೆಗೆ ಬರುತ್ತಿದ್ದ ಬಾಲಕನನ್ನು ಕೊಠಡಿಗೆ ಕರೆದೊಯ್ದು ಆತನ ಪ್ಯಾಂಟ್ನೊಳಗೆ ಕೈಹಾಕಿ ಗುಪ್ತಾಂಗವನ್ನು ಸ್ಪರ್ಶಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಗಸ್ಟ್ 14ರಂದು ಮತ್ತೆ ಕಿರುಕುಳ ನೀಡಿದ ಆರೋಪ:
ಆಗಸ್ಟ್ 14ರಂದು ಸಂಜೆ ಸುಮಾರು 6.30ಕ್ಕೆ ಬಾಲಕ ಪ್ರಾರ್ಥನೆಗಾಗಿ ಚರ್ಚ್ಗೆ ತೆರಳಿದ್ದ ಸಂದರ್ಭದಲ್ಲಿ ಆತನನ್ನು ಕೊಠಡಿಗೆ ಕರೆದೊಯ್ದು ಪ್ಯಾಂಟ್ನೊಳಗೆ ಕೈಹಾಕಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಕುರಿತು ಬಾಲಕ ತನ್ನ ಸ್ನೇಹಿತರು ಹಾಗೂ ಇತರ ಬಾಲಕರೊಂದಿಗೆ ಮಾಹಿತಿ ಹಂಚಿಕೊಂಡಾಗ, ಅವರಿಗೂ ಇದೇ ರೀತಿಯ ಅನುಭವವಾಗಿದೆ ಎಂಬ ವಿಚಾರ ತಿಳಿದುಬಂದಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಇದಾದ ಬಳಿಕವೂ ಬಾಲಕನಿಗೆ ಕಿರುಕುಳ ಮುಂದುವರಿದಿತ್ತು ಎನ್ನಲಾಗಿದ್ದು, ಕೊನೆಗೆ ಬಾಲಕ ತನ್ನ ಪೋಷಕರಿಗೆ ಘಟನೆಯ ಬಗ್ಗೆ ತಿಳಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಬಿಷಪರಿಗೆ ಮಾಹಿತಿ: ಬಳಿಕ ಪೊಲೀಸ್ ದೂರು
ಬಾಲಕನಿಂದ ವಿಷಯ ತಿಳಿದ ಪೋಷಕರು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಮುಖ್ಯಸ್ಥ ಬಿಷಪರಿಗೆ ಈ ಕುರಿತು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ಸಲ್ಲಿಕೆಯಾಗಿದ್ದು, ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಮಹತ್ವ ಪಡೆದುಕೊಂಡಿದೆ. ಆರೋಪಗಳ ಸತ್ಯಾಸತ್ಯತೆ, ಘಟನೆಗಳ ಹಿನ್ನೆಲೆ ಹಾಗೂ ಇತರ ಬಾಲಕರು ಸಂತ್ರಸ್ತರಾಗಿದ್ದಾರೆಯೇ ಎಂಬುದನ್ನು ತನಿಖೆಯಿಂದ ದೃಢಪಡಿಸಬೇಕಿದೆ. ಪ್ರಕರಣದ ಕುರಿತು ಪೊಲೀಸ್ ತನಿಖೆಯ ನಂತರವಷ್ಟೇ ಹೆಚ್ಚಿನ ವಿವರಗಳು ಬಹಿರಂಗವಾಗಬೇಕಿವೆ