ಡೈಲಿವಾರ್ತೆ:16/ಅ./2026

ಉಳ್ತೂರು ಮಲತ್ಯಾಜ್ಯ ಘಟಕ ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಡೆ: ಸ್ಥಳೀಯರ ತೀವ್ರ ವಿರೋಧದ ನಡುವೆಯೇ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ಆರಂಭ – ಕಾನೂನು ಹೋರಾಟದ ಬಳಿಕ ಕಾಮಗಾರಿಗೆ ಬ್ರೇಕ್

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಲತ್ಯಾಜ್ಯ ನಿರ್ವಹಣಾ ಘಟಕವನ್ನು ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರಿನಲ್ಲಿ ನಿರ್ಮಿಸುವ ಕಾಮಗಾರಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಶುಕ್ರವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆರಂಭಿಸಲಾಗಿದ್ದ ಕಾಮಗಾರಿಗೆ ನ್ಯಾಯಾಲಯದ ಆದೇಶದಿಂದ ತಡೆ ಬಿದ್ದಿದೆ.

ಉಳ್ತೂರಿನಲ್ಲಿ ಮಲತ್ಯಾಜ್ಯ ಘಟಕ ನಿರ್ಮಿಸುವ ಕಾಮಗಾರಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ಕಾಮಗಾರಿ ನಡೆಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೂ, ಉಡುಪಿ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಶುಕ್ರವಾರ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸ್ಥಳೀಯರ ಪ್ರತಿಭಟನೆಯ ನಡುವೆಯೂ ಜಿಲ್ಲಾಡಳಿತ ಕಾಮಗಾರಿ ಮುಂದುವರಿಸಿದ್ದರಿಂದ ವಿವಾದ ತೀವ್ರಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳೀಯರ ಪರವಾಗಿ ಅಜಿತ್ ಶೆಟ್ಟಿ ಉಳ್ತೂರು ಹಾಗೂ ನ್ಯಾಯವಾದಿ ಅವಿನಾಶ್ ಶೆಟ್ಟಿ ಬೇಳೂರು ಇವರುಗಳು ಮಲತ್ಯಾಜ್ಯ ಘಟಕದ ಕಾಮಗಾರಿಯನ್ನು ತಡೆಹಿಡಿಯುವಂತೆ ಪೂರಕ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸುವ ಕಾನೂನು ಪ್ರಕ್ರಿಯೆಗೆ ಮುಂದಾದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಪವನ್ ಚಂದ್ರಶೆಟ್ಟಿ ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಕಾಮಗಾರಿ ಮುಂದುವರಿಸದಂತೆ ರಿಟ್ ಪಿಟಿಷನ್ ನಂಬ್ರ 32707/2026 ರಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸ್ಥಳೀಯರ ವಿರೋಧದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ಆರಂಭಗೊಂಡಿದ್ದ ಕಾಮಗಾರಿಗೆ ಇದೀಗ ನ್ಯಾಯಾಲಯದ ಮಧ್ಯಂತರ ಆದೇಶದಿಂದ ತಡೆ ಬಿದ್ದಿದೆ. ಈ ಬೆಳವಣಿಗೆಯೊಂದಿಗೆ ಮಲತ್ಯಾಜ್ಯ ಘಟಕದ ವಿಚಾರದಲ್ಲಿ ಸ್ಥಳೀಯರು ನಡೆಸುತ್ತಿದ್ದ ಹೋರಾಟಕ್ಕೆ ತಾತ್ಕಾಲಿಕ ಬಲ ದೊರೆತಂತಾಗಿದೆ.