




ಡೈಲಿವಾರ್ತೆ:17/ಅ./2026

ಎಂಆರ್ಪಿಎಲ್ ಸ್ಫೋಟ ಪ್ರಕರಣ: ಗಾಯಾಳು ರಾಜೇಶ್ ಬ್ಯಾಪ್ಟಿಸ್ಟ್ ಮೃತ್ಯು

ಮಂಗಳೂರು, ಅ.17: ಜೋಕಟ್ಟೆಯ ಎಂಆರ್ಪಿಎಲ್ನ ಮೂರನೇ ಹಂತದ ವಿಸ್ತರಣಾ ಘಟಕದಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ ಭೀಕರ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುರತ್ಕಲ್ ಮೇಲ್ವೇತುವೆ ಸಮೀಪದ ನಿವಾಸಿ ರಾಜೇಶ್ ಬ್ಯಾಪ್ಟಿಸ್ಟ್ (38) ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಸ್ಫೋಟದ ತೀವ್ರತೆಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿದ್ದ ರಾಜೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿತ್ತೆಂದು ಹೇಳಲಾಗಿದ್ದರೂ, ಮುಖ ಮತ್ತು ಎದೆಯ ಭಾಗದಲ್ಲಿ ಗಂಭೀರ ಸುಟ್ಟ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಅಂತಿಮವಾಗಿ ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜೇಶ್ ಅವರ ತಂದೆ-ತಾಯಿ ಈಗಾಗಲೇ ಮೃತಪಟ್ಟಿದ್ದು, ಅವರು ಅವಿವಾಹಿತರಾಗಿದ್ದರು. ಅವರಿಗೆ ಒಬ್ಬ ಸೋದರನಿದ್ದು, ಕುಟುಂಬದ ಇತರ ಸದಸ್ಯರು ಆಸ್ಪತ್ರೆಯಲ್ಲಿ ಅವರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಸ್ಫೋಟಕ್ಕೆ ಬಲಿಯಾಗಿದ್ದ ಯುವ ನೌಕರ
ಎಂಆರ್ಪಿಎಲ್ನ ಮೂರನೇ ಹಂತದ ವಿಸ್ತರಣಾ ಘಟಕದಲ್ಲಿ ಸೆಪ್ಟೆಂಬರ್ 30ರಂದು ಮಧ್ಯಾಹ್ನ ಏಕಾಏಕಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಮುಲ್ಕಿ ಸಮೀಪದ ಹಳೆಯಂಗಡಿ ನಿವಾಸಿ, ಸಂಸ್ಥೆಯ ನೌಕರ ಮನೀಶ್ ಕರ್ಕಡ (23) ಸ್ಥಳದಲ್ಲೇ ಮೃತಪಟ್ಟಿದ್ದರು. ರಾಜೇಶ್ ಸೇರಿದಂತೆ ಇತರ ಎಂಟು ಮಂದಿಗೆ ಸುಟ್ಟ ಗಾಯಗಳಾಗಿದ್ದವು.
ಸ್ಫೋಟದ ಬೆನ್ನಲ್ಲೇ ಘಟಕದ ಸುತ್ತಮುತ್ತ ದಟ್ಟ ಹೊಗೆ ಆವರಿಸಿತ್ತು. ಭಾರೀ ಸ್ಫೋಟದ ಸದ್ದು ಮಂಗಳೂರು, ಬಜ್ಪೆ ಸೇರಿದಂತೆ ಆಸುಪಾಸಿನ ಪ್ರದೇಶಗಳಲ್ಲಿಯೂ ಕೇಳಿಬಂದಿದ್ದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪರಿಹಾರದ ನಿರೀಕ್ಷೆ:
ಸ್ಫೋಟದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಎಂಆರ್ಪಿಎಲ್ ಸಂಸ್ಥೆಯು ₹1 ಕೋಟಿ ಪರಿಹಾರ ನೀಡಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ರಾಜೇಶ್ ಕೂಡ ಮೃತಪಟ್ಟಿರುವುದರಿಂದ, ಅವರ ಕುಟುಂಬಕ್ಕೂ ಇದೇ ಮಾದರಿಯಲ್ಲಿ ಪರಿಹಾರ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಸಂಸ್ಥೆಯಿಂದ ಅಧಿಕೃತ ಘೋಷಣೆ ಹೊರಬಿದ್ದಿರುವ ಮಾಹಿತಿ ಲಭ್ಯವಾಗಿಲ್ಲ.