ಡೈಲಿವಾರ್ತೆ:17/ಅ./2026

ಬ್ರಹ್ಮಾವರ: ನಕಲಿ ಆಸ್ತಿ ದಾಖಲೆ ಸಲ್ಲಿಸಿ ₹1 ಕೋಟಿ ಸಾಲ ಪಡೆದ ಆರೋಪ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಬ್ರಹ್ಮಾವರ, ಅ.17: ಆಸ್ತಿಗೆ ಸಂಬಂಧಿಸಿದ ಕ್ರಯಸಾಧನ ಹಾಗೂ ಅಡಮಾನ ದಾಖಲೆಗಳನ್ನು ಸಲ್ಲಿಸಿ ₹1.60 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ, ದಾಖಲೆಗಳ ಸತ್ಯಾಸತ್ಯತೆ ಕುರಿತು ಅನುಮಾನ ವ್ಯಕ್ತವಾಗಿದ್ದು, ವಂಚನೆ ಹಾಗೂ ನಕಲಿ ದಾಖಲೆಗಳ ಬಳಕೆಯ ಆರೋಪದ ಮೇರೆಗೆ ಇಬ್ಬರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಎಸ್‌ಜಿಆರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನೀಡಿದ ದೂರಿನ ಪ್ರಕಾರ, ಆರೋಪಿಗಳಾದ ಯು. ಅಭಿಷೇಕ್ ಮತ್ತು ರಮಾ ಜೆ. ರಾವ್ ಅವರು ಆಸ್ತಿಗೆ ಸಂಬಂಧಿಸಿದ ಕ್ರಯಸಾಧನ ಹಾಗೂ ಅಡಮಾನ ದಾಖಲೆಗಳನ್ನು ಸಲ್ಲಿಸಿ ₹1,60,00,000 ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು 2026ರ ಸೆಪ್ಟೆಂಬರ್ 17ರಂದು ಬ್ರಹ್ಮಾವರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿದ್ದವು.

ಸಲ್ಲಿಸಲಾದ ದಾಖಲೆಗಳನ್ನು ಮೂಲ ದಾಖಲೆಗಳೆಂದು ನಂಬಿದ ಸೊಸೈಟಿಯು ಆರೋಪಿಗಳಿಗೆ ಒಟ್ಟು ₹1,00,00,500 ಮೊತ್ತದ ಸಾಲವನ್ನು ಬಿಡುಗಡೆ ಮಾಡಿತ್ತು ಎನ್ನಲಾಗಿದೆ. ಆದರೆ, ಬಳಿಕ ಸದರಿ ಆಸ್ತಿಗೆ ಸಂಬಂಧಿಸಿದ ಮೊಹಮ್ಮದ್ ಶಾಕೀರ್ ಅವರು ದಾಖಲೆಗಳ ಸತ್ಯಾಸತ್ಯತೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, ತಮ್ಮ ಸಹಿ ಸೇರಿದಂತೆ ಇತರ ದಾಖಲೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಅನುಮಾನವನ್ನೂ ಮುಂದಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಸ್ತಿ ದಾಖಲೆಗಳ ನೈಜತೆ, ನಕಲಿ ದಾಖಲೆಗಳ ಸೃಷ್ಟಿ, ವಂಚನೆ ಹಾಗೂ ಅವುಗಳನ್ನು ಅಸಲಿ ದಾಖಲೆಗಳೆಂದು ಬಳಕೆ ಮಾಡಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೊಸೈಟಿಯು ಪೊಲೀಸರಿಗೆ ಮನವಿ ಮಾಡಿದೆ.

ಈ ದೂರಿನ ಆಧಾರದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 196/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 316(2), 318(4), 336(3), 338, 340(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ