ಡೈಲಿ ವಾರ್ತೆ : 29 ಸೆಪ್ಟೆಂಬರ್ 2022

ಗಂಗೊಳ್ಳಿ ಬಂದರು ಜೆಟ್ಟಿ ಕುಸಿತ: ಅವೈಜ್ಞಾನಿಕ ಕಾಮಗಾರಿ ಆರೋಪ, ಹೋರಾಟದ ಎಚ್ಚರಿಕೆ

ಕುಂದಾಪುರ : ಗಂಗೊಳ್ಳಿ ಮೀನುಗಾರಿಕ ಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಜೆಟ್ಟಿ ನಿರ್ಮಾಣ ಕಾಮಗಾರಿ ಮೇಲೆ ಹಳೆ ಕಾಮಗಾರಿ ಶೇಷ ಬಿದ್ದ ಕಾರಣ ಹೊಸ ಜೆಟ್ಟಿಗೂ ಹಾನಿಯಾದ ಘಟನೆ ಬುಧವಾರ ಸಂಜೆ ಸಂಭವಿಸಿದೆ.

150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿದ್ದು, ಸಂಜೆ 5.30ರ ಹೊತ್ತಿಗೆ ಘಟನೆ ಸಂಭವಿಸಿದ ಬಳಿಕ ನಿರಂತರವಾಗಿ ಕುಸಿತವಾಗುತ್ತಿದ್ದರೂ ಕೂಡ ಸಂಬಂದಪಟ್ಟವರು ಗಮನ ಹರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶಿವಮೊಗ್ಗ ಸಂಸದ ಹಾಗೂ ಬೈಂದೂರು ಶಾಸಕರ ಮುತುವರ್ಜಿಯಲ್ಲಿ 12.8 ಕೋ.ರೂ. ಅನುದಾನದಲ್ಲಿ ನೂತನ ಜೆಟ್ಟಿ ಕಾಮಗಾರಿ ನಡೆಯುತ್ತಿದೆ. ಹಳೆ ಜೆಟ್ಟಿ ಕುಸಿತದ ಕಾರಣ ಹೊಸ ಜೆಟ್ಟಿಯ ವಿನ್ಯಾಸ ಬದಲಿಸುವ ಕುರಿತು ಇಲಾಖೆ ಆಲೋಚಿಸುತ್ತಿದೆ. ಕಾಮಗಾರಿಗಾಗಿ ಹಳೆ ಜೆಟ್ಟಿಯ ಗೋಡೆ ನಡುವೆ ಯಿದ್ದ ರಾಡ್‌ ತುಂಡರಿಸಿದ್ದರಿಂದ ಕುಸಿತಕ್ಕೊಳಗಾಗಿದೆ. ಈಗ ನಡೆಯುತ್ತಿರುವ ಕಾಮಗಾರಿ ಮಾಡಿದ ಪಿಲ್ಲರ್‌ ಮೇಲೆ ಹಳೆ ಜೆಟ್ಟಿ ಬಿದ್ದ ಕಾರಣ ಪಿಲ್ಲರ್‌ ಕುಸಿದಿದೆ.

ಹೋರಾಟದ ಎಚ್ಚರಿಕೆ: ಸದ್ಯದ ಪರಿಸ್ಥಿತಿಯಲ್ಲಿ ಮೀನು ಖಾಲಿ ಮಾಡಲು ದೂರದ ಭಟ್ಕಳ ಮೊದಲಾ ದೆಡೆ ತೆರಳಬೇಕಾದ ಅನಿವಾರ್ಯವಿದೆ. ಹೀಗಾಗಿ ಈ ಸಮಸ್ಯೆಗೆ ಶೀಘ್ರ ಪರಿಹಾರವೊದಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಿಶ್ಚಿತ ಎಂದು ಗಂಗೊಳ್ಳಿಯ ಹಸಿ ಮೀನು ವ್ಯಾಪಾರಸ್ಥರ ಸಂಘದವರು ಎಚ್ಚರಿಕೆ ನೀಡಿದ್ದಾರೆ.