ಡೈಲಿ ವಾರ್ತೆ: 17/ಮೇ /2024
✍🏻 ಪ್ರಧಾನ ಸಂಪಾದಕರು: ಇಬ್ರಾಹಿಂ ಕೋಟ
ಪವಾಡಗಳೊಡೆಯ ಸಾಸ್ತಾನ
ಕಳಿಬೈಲ್ ಕೊರಗಜ್ಜ.!
ಕೋಟ: ಪವಾಡಗಳಿಗೆ ಹೆಸರಾಗಿ ಭಕ್ತಾಭೀಷ್ಟ ಪ್ರದಾನದ ಕಳಿಬೈಲ್ ಕೊರಗಜ್ಜನ ಸನ್ನಿಧಾನದಲ್ಲಿ ಇದೇ ಮೇ 10, 11 ಮತ್ತು 12 ರಂದು ಗೆಂಡೋತ್ಸವ, ನೇಮೋತ್ಸವ ಹಾಗೂ ಮಾರಿ ಪೂಜೆ ಬಹು ವಿಜೃಂಭಣೆಯಿಂದ ನೆರವೇರಿತು.
ಸಂಕಷ್ಟದಲ್ಲಿರುವ ಭಕ್ತರು ಮೊರೆಯಿಟ್ಟಾಗ ಅದನ್ನು ಆಲಿಸುವ ಇಲ್ಲಿನ ಅಧಿದೈವ ಕೊರಗಜ್ಜ, ತಕ್ಷಣ ಅವರ ಅಭೀಷ್ಟವನ್ನು ಈಡೇರಿಸುವ ಮೂಲಕ ಹಲವು ಪವಾಡಗಳಿಗೆ ಸನ್ನಿಧಿ ಸಾಕ್ಷಿಯಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಸಾಸ್ತಾನದ ಕೆಳಬೆಟ್ಟು ಮೂಡಹಡು ಎಂಬ ಗ್ರಾಮದಲ್ಲಿ ನೆಲೆನಿಂತ ಈ ಕೊರಗಜ್ಜ ನಂಬಿದವರ ಪಾಲಿನ ಕಾಮಧೇನು. ಶ್ರೀ ಕ್ಷೇತ್ರ ಕಳಿಬೈಲ್ ಎಂದೇ ಖ್ಯಾತವಾದ ಈ ಸನ್ನಿಧಿಯಲ್ಲಿ ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿಯರೂ ಸಪರಿವಾರರಾಗಿ ಜೊತೆ ನೆಲೆಸಿದ್ದಾರೆ.
ಬೆಂಗಳೂರಿನ ಕುಟುಂಬವೊಂದು ಇಲ್ಲಿನ ಕೊರಗಜ್ಜನ ಅನನ್ಯ ಭಕ್ತರು. ಒಮ್ಮೆ ಈ ಕುಟುಂಬದ ಮಹಿಳೆಯೋರ್ವರು ಬಹು ಬೆಲೆಬಾಳುವ ಚಿನ್ನದ ಬಳೆಯೊಂದನ್ನು ಸಾರ್ವಜನಿಕ ಸ್ಥಳದಲ್ಲಿ ಕಳೆದುಕೊಂಡರು. ಮಹಾನಗರದ ಹಾದಿ ಬೀದಿ ಎಲ್ಲೆಂದರಲ್ಲಿ ಹುಡುಕಾಡಿದರೂ ಬಳೆ ಪತ್ತೆಯಾಗಲಿಲ್ಲ. ಚಿಂತಾಕ್ರಾಂತರಾದ ಕುಟುಂಬಕ್ಕೆ ಆಗ ಸ್ಮರಣೆಗೆ ಬಂದದ್ದೇ ಕಳಿಬೈಲ್ ಕೊರಗಜ್ಜ. ಆ ಮಹಿಳೆ ಅನನ್ಯ ಭಕ್ತಿಯಿಂದ ಕೊರಗಜ್ಜನನ್ನು ನೆನೆದು, ತನ್ನ ಚಿನ್ನದ ಬಳೆ ಸಿಗಲಿ, ಕೊರಗಜ್ಜನಿಗೆ ಅಗೆಲು ಸೇವೆ ನೀಡುವೆ ಎಂಬ ಹರಕೆ ಹೊತ್ತರು. ನಂತರ ಬಳೆ ಹುಡುಕುವಾಗ ಬೆಂಗಳೂರು ಮಹಾನಗರದ, ಸಹಸ್ರಾರು ಜನ ಓಡಾಡುವ, ಸಾರ್ವಜನಿಕ ಸ್ಥಳವೊಂದರಲ್ಲಿನ ಬೇಕರಿ ಪಕ್ಕದಲ್ಲಿ ಬಿದ್ದಿದ್ದ ಬಳೆ ಸಿಕ್ಕಿತು. ಕೊರಗಜ್ಜನ ಮಹಿಮೆಗೆ ಭಾವ ಪರವಶವಾದ ಮಹಿಳೆಯ ಕುಟುಂಬ ಕಳಿಬೈಲಿಗೆ ಬಂದು ಹರಿಕೆ ತೀರಿಸಿ, ಕೊರಗಜ್ಜ ಮತ್ತು ಪರಿವಾರ ದೈವ – ದೇವರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊಕ್ಕರ್ಣೆಯ ಕಾಡೂರಿನ ಓರ್ವ ಮಹಿಳೆಯ ಸುಮಾರು 16 ಗ್ರಾಮ್ ಚಿನ್ನದ ಕರಿಮಣಿ ಸರ ಕಳೆದಿತು. ದಿಕ್ಕುತೋಚದ ಆಕೆ ಕಳಿಬೈಲಿಗೆ ಬಂದು ಕೊರಗಜ್ಜನಲ್ಲಿ ತನ್ನ ಅಳಲು ತೋಡಿಕೊಂಡರು. ಪ್ರಶ್ನೆ ನೋಡಿದ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಅಭಿಜಿತ್ ಪಾಂಡೇಶ್ವರ ಅವರು ಕೊರಗಜ್ಜನ ನುಡಿಯಂತೆ, ಕಳೆದುಹೋದ ಕರಿಮಣಿ ಸರ 24 ಗಂಟೆಯೊಳಗೆ ಸಿಗುತ್ತದೆ. ಅದು ಮಲಿನವಾದ ಸ್ಥಳದಲ್ಲಿ ಸುರಕ್ಷಿತವಾಗಿದೆ ಎಂದು ಹೇಳಿ ಪ್ರಸಾದ ನೀಡಿದರು. ಚಿಂತಾಕ್ರಾಂತೆಯಾದ ಮಹಿಳೆ ಮನೆಗೆ ಬಂದು ಎಲ್ಲೆಡೆ ಹುಡುಕುವಾಗ ಟಾಯಿಲೆಟ್ ಕಮೋಡ್ ಒಳಗೆ ಬಿದ್ದಿದ್ದ ಸರ ಸಿಕ್ಕಿತು. ಕೊರಗಜ್ಜನ ಪವಾಡಕ್ಕೆ ತಲೆಬಾಗಿದ ಮಹಿಳೆಯ ಕುಟುಂಬ ಮೇ 16 ರಂದು ಕಳಿಬೈಲಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಬೆಲೆಬಾಳುವ ಚಿನ್ನದ ಕರಿಮಣಿ ಸರ ಪುನಃ ಪಡೆದ ಕುಟುಂಬ ಈ ವಿದ್ಯಮಾನವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.
ಜೀವನದಲ್ಲಿ ನೊಂದು ಬೆಂದು ಬಸವಳಿದ ಜನರು ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಸರೆ ಎಂಬಂತೆ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ಪ್ರಾರ್ಥನೆ ಮಾಡಿಕೊಂಡಾಗ ಪವಾಡದಂತೆ ಅವರ ಕಷ್ಟಗಳು ಕಳೆದು ಹೊಸ ಜೀವನ ಸಿಕ್ಕಿದ ಉದಾಹರಣೆಗಳು ಸಾಕಷ್ಟಿವೆ. ಈ ಕಾರಣದಿಂದಾಗಿ ದಿನೇ ದಿನೇ ಕೊರಗಜ್ಜನ ಮಹಿಮೆ ಹರಡಿ, ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕ್ಷೇತ್ರದ ಅರ್ಚಕರು ಕೂಡಾ ನೊಂದು ಬಂದ ಭಕ್ತರನ್ನು ಸಾಂತ್ವನಿಸಿ, ಅವರ ಸೇವೆಗಳನ್ನು ಪೂರೈಸಿಕೊಡುತ್ತಾರೆ.