ಡೈಲಿ ವಾರ್ತೆ: 22 ಅಕ್ಟೋಬರ್ 2022

ಪ್ರತಿಭಾ ಕುಳಾಯಿ ಗೌರವಕ್ಕೆ ಧಕ್ಕೆ : ಆರೋಪಿಯ ಶೀಘ್ರ ಬಂಧನ: ಎನ್. ಶಶಿಕುಮಾರ್

ಮಂಗಳೂರು: ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಬರೆದು ಅವರ ಗೌರವಕ್ಕೆ ಧಕ್ಕೆ ತಂದ ವ್ಯಕ್ತಿಯ ಬಂಧನಕ್ಕೆ ಎರಡು ತಂಡ ರಚಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.


ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಟೋಲ್ ಸಂಗ್ರಹ ಕೇಂದ್ರದ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಮಾಧ್ಯಮ ರಂಗದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವ ಅಶ್ಲೀಲವಾಗಿ ಬರೆದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾನೆ. ಈ ಮೂಲಕ ಕಾರ್ಯಕರ್ತೆಯ ಗೌರವಕ್ಕೆ ಧಕ್ಕೆ ತಂದಿದ್ದಾನೆ. ಈ ಬಗ್ಗೆ ಮಹಿಳೆ, ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು. ದೂರನ್ನು ಮಹಿಳಾ ಠಾಣೆಗೆ ವರ್ಗಾಯಿಸಿ ಅಲ್ಲಿ ಸಂಬಂಧಪಟ್ಟ ಕಲಂಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳನ್ನು ಆದಷ್ಟು ಶೀಘ್ರವೇ ಬಂಧಿಸಲಾಗುವುದು. ಇದಕ್ಕೆ ಒಂದೆರಡು ತಂಡಗಳನ್ನು ರಚಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆರೋಪಿ “ಕಹಳೆ ನ್ಯೂಸ್” ಸಂಪಾದಕ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಎಂಬಾತ ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಕಾರಿಯಾಗಿ ಫೇಸ್ ಬುಕ್ ನಲ್ಲಿ ಬರೆದಿದ್ದು, ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೀಗ ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಾಗಿದೆ.