ಡೈಲಿ ವಾರ್ತೆ: 30 ಅಕ್ಟೋಬರ್ 2022

ಹಿರಿಯ ನಟಿ ವಿನಯಪ್ರಸಾದ್ ಮನೆಯಲ್ಲಿ ಕಳ್ಳತನ : ನಗದು, ಚಿನ್ನಾಭರಣ ದೋಚಿದ ಕಳ್ಳರು



ಬೆಂಗಳೂರು: ಬಹುಭಾಷಾ ಹಿರಿಯ ನಟಿ ವಿನಯಪ್ರಸಾದ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಎಗರಿಸಿರುವ ದುರ್ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದೆ.

ನಟಿ ವಿನಯ ಪ್ರಸಾದ್ ಅವರು, ದೀಪಾವಳಿ ಹಬ್ಬಕ್ಕೆ ಕುಟುಂಬ ಸಮೇತ ತಮ್ಮ ಹುಟ್ಟೂರು ಉಡುಪಿಗೆ ಹೋಗಿದ್ದರು. ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು ದೀಪಾವಳಿ ಹಬ್ಬದ ದಿನವೇ ಬೀಗ ಮುರಿದು 7 ಸಾವಿರ ನಗದು ಚಿನ್ನಾಭರಣ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.

ಹಬ್ಬ ಮುಗಿಸಿ ವಿನಯ ಪ್ರಸಾದ್ ಅವರು ನಂದಿನಿ ಲೇಔಟ್‍ನಲ್ಲಿರುವ ತಮ್ಮ ಮನೆಗೆ ಬಂದಾಗ ಕಳ್ಳತನ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಯುತ್ತಿದೆ.

ದೀಪಾವಳಿ ಹಬ್ಬದ ದಿನವೇ ಉತ್ತರ ವಿಭಾಗದ ನಾಲ್ಕೈದು ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿಯ ಘಟನೆಗಳು ನಡೆದಿದ್ದು, ಮನೆ ಮಾಲೀಕರು ಮನೆಯಲ್ಲಿ ಇಲ್ಲದೇ ಇರುವುದು ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದ ಪಟಾಕಿ ಹೊಡೆಯುವುದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕಳ್ಳರು, ಜೆಸಿ ನಗರ, ಮಲ್ಲೇಶ್ವರಂ, ಸುಬ್ರಹ್ಮಣ್ಯನಗರ, ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಕರಾಮತ್ತನ್ನು ತೋರಿಸಿದ್ದಾರೆ.